ಜ.26ರಂದು ಎಲ್ಲ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಲು ಡಿಸಿ ಸೂಚನೆ

ಮಂಗಳೂರು, ಜ.18: ಕೇಂದ್ರದ ನೀತಿ ಆಯೋಗವು ಗಣರಾಜ್ಯೋತ್ಸವ ದಿನವಾದ ಜ.26ರಂದು ದೇಶದ ಎಲ್ಲ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆಯನ್ನು ನಡೆಸಲು ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆಯನ್ನು ಆಯೋಜಿಸಲು ಎಲ್ಲ ರೀತಿಯ ಸಿದ್ಧತೆ ಮಾಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಹೇಳಿದ್ದಾರೆ.
ಬುಧವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಆಯೋಗದ ಮುಂದಿನ ಯೋಜನೆಯ ರೂಪುರೇಷಗಳ ಯಶಸ್ವಿಗೆ ಪ್ರತಿಯೊಬ್ಬ ಗ್ರಾಮಸ್ಥ ಆದ್ಯತೆಗಳ ವಿವರ ಅಥವಾ ಸಲಹೆಗಳನ್ನು ನೀಡುವ ಅಗತ್ಯವಿರುವುದರಿಂದ ಗ್ರಾಮಸ್ಥರು ಈ ವಿಶೇಷ ಗ್ರಾಮಸಭೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
12ನೆ ಪಂಚವಾರ್ಷಿಕ ಯೋಜನೆಯು 2017ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯ ದೂರದೃಷ್ಟಿಯಂತೆ ಭಾರತದ ಪ್ರತಿಯೊಬ್ಬ ನಾಗರಿಕನ ಆದ್ಯತೆಯನ್ನು ಪರಿಗಣಿಸಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 15 ವರ್ಷಗಳ ದೂರದೃಷ್ಟಿಯಿಂದ ಯೋಜನೆಯನ್ನು ತಯಾರಿಸಬೇಕು ಎಂಬುದು ನೀತಿ ಆಯೋಗದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜ.26ರಂದು ನಡೆಯುವ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಮೂಲಭೂತ ಸೌಕರ್ಯ, ಆರೋಗ್ಯ, ನೈರ್ಮಲ್ಯ, ಶಿಕ್ಷಣ, ಉದ್ಯೋಗ ಇತ್ಯಾದಿ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ ಎಂದು ಜಿಪಂ ಸಿಇಒ ಡಾ. ಎಂ.ಆರ್. ರವಿ ಹೇಳಿದರು.
ಎಲ್ಲ ಗ್ರಾಪಂ ಪಿಡಿಒ-ಕಾರ್ಯದರ್ಶಿಗಳು ಗ್ರಾಮಸಭೆಯಲ್ಲಿ ಮಂಡನೆಯಾದ ನಾಗರಿಕರ ಅಹವಾಲುಗಳನ್ನು ಸಂಕ್ಷಿಪ್ತವಾಗಿ 1 ಪುಟದಲ್ಲಿ ವಿವರಿಸಿ ಜಿಪಂಗೆ ಕಳುಹಿಸಿಕೊಡಬೇಕು. ಅದನ್ನು ಜಿಪಂ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಿದೆ. ಆ ಬಳಿಕ ‘ಭಾರತೀಯ ನಾಗರಿಕನ ದೃಷ್ಟಿಕೋನ’ದ ಬಗ್ಗೆ ಕೇಂದ್ರ ಯೋಜನೆ ರೂಪಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ ಉಪಸ್ಥಿತರಿದ್ದರು.
ಟೋಲ್‌ಗೇಟ್ ವಸೂಲಿಗೆ ಕ್ರಮ:
ರಾ.ಹೆ.66ರ ತಲಪಾಡಿಯಿಂದ ಕುಂದಾಪುರದವರೆಗಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಎನ್‌ಎಚ್‌ಐ ಟೋಲ್‌ಗೇಟ್ ಸಂಗ್ರಹಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಪತ್ರಕರ್ತರು ಗಮನ ಸೆಳೆದಾಗ, ಎನ್‌ಎಚ್‌ಐ ಜಿಲ್ಲಾಡಳಿತದ ಅಧೀನದಲ್ಲಿಲ್ಲ. ಆದರೆ ಕೇಂದ್ರದ ಮಾನದಂಡವನ್ನು ಉಲ್ಲಂಘಿಸಿದಂತೆ ಎಚ್ಚರಿಕೆ ವಹಿಸಲಾಗುವುದಿಲ್ಲ ಎಂದರು.
ಸರಕಾರಕ್ಕೆ ಪತ್ರ:
ಬೋರ್‌ವೆಲ್ ಕೊರೆಯಲು ಅವಕಾಶ ನೀಡದಂತೆ ರಾಜ್ಯ ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಈ ಮಧ್ಯೆ ಜಿಲ್ಲೆಯ ಕೃಷಿಕರು ಹಾಗು ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಲಾಗದ ಸ್ಥಳದಲ್ಲಿ ನೆಲೆಸುವವರು ಬೋರ್‌ವೆಲ್ ಕೊರೆಯಲು ಅವಕಾಶ ಮಾಡುವಂತೆ ಮನವಿ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಕೃಷಿಕರು ಮತ್ತು ಈ ನಾಗರಿಕರಿಗೆ ಬೋರ್‌ವೆಲ್‌ಗೆ ಸಂಬಂಧಿಸಿ ವಿನಾಯತಿ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಜಗದೀಶ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







