ನೈಜೀರಿಯ: ನಿರಾಶ್ರಿತರ ಶಿಬಿರದಲ್ಲಿ ಮಾರಣಹೋಮ : 100ಕ್ಕೂ ಅಧಿಕ ಮಂದಿ ಬಲಿ
ವಾಯುಪಡೆ ವಿಮಾನದಿಂದ ಆಕಸ್ಮಿಕ ಬಾಂಬೆಸೆತ

ಮಾಯಿದುಗುರಿ (ನೈಜೀರಿಯ),ಜ.18: ಬೊಕೋ ಹರಾಮ್ ಉಗ್ರರ ವಿರುದ್ಧ ದಾಳಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೈಜೀರಿಯ ವಾಯುಪಡೆಯ ವಿಮಾನವೊಂದು ತಪ್ಪು ಗ್ರಹಿಕೆಯಿಂದ ರಾನ್ ಪಟ್ಟಣದ ಸಮೀಪದ ನಿರಾಶ್ರಿತ ಶಿಬಿರವೊಂದರ ಮೇಲೆ ಬಾಂಬ್ ಎಸೆದ ಪರಿಣಾಮವಾಗಿ 100ಕ್ಕೂ ಅಧಿಕ ಮಂದಿ ಅಮಾಯಕ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ನೆರವು ಕಾರ್ಯಕರ್ತರು ಸೇರಿದಂತೆ 120 ಮಂದಿ ಗಾಯಗೊಂಡಿದ್ದಾರೆ.
ಬಾಂಬ್ ದಾಳಿಯಲ್ಲಿ ಗಾಯಗೊಂಡವರನ್ನು ಶಿಬಿರದಿಂದ ತೆರವುಗೊಳಿಸುವ ಕಾರ್ಯದಲ್ಲಿ ಬೊರ್ನೊ ರಾಜ್ಯ ಸರಕಾರದ ಅಧಿಕಾರಿಗಳು ಸೈನಿಕರಿಗೆ ನೆರವಾಗುತ್ತಿದ್ದಾರೆ. ಬೊಕೊ ಹರಾಮ್ ಉಗ್ರರ ದಾಳಿಯಲ್ಲಿ ಸಂತ್ರಸ್ತರಾದ ನೂರಾರು ನಿರಾಶ್ರಿತರ ಈ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದರು.
ಕ್ಯಾಮರೂನ್ ದೇಶದ ಗಡಿಗೆ ತಾಗಿಕೊಂಡಿರುವ ನೈಜೀರಿಯದ ರಾನ್ ಪಟ್ಟಣದ ಸಮೀಪದ ನಿರಾಶ್ರಿತ ಶಿಬಿರದ ಮೇಲೆ ನೈಜೀರಿಯದ ವಾಯುಪಡೆಯ ವಿಮಾನವು ಆಕಸ್ಮಿಕವಾಗಿ ಬಾಂಬ್ ಎಸೆದಿರುವುದನ್ನು ಸೇನಾ ಕಮಾಂಡರ್ ಮೇ.ಜ. ಲಕ್ಕಿ ಇರಾಬೊರ್ ದೃಢಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ನೆರವು ಕಾರ್ಯಕರ್ತರು ‘ಡಾಕ್ಟರ್ ವಿತೌಟ್ ಬಾರ್ಡರ್ಸ್ ’ ಹಾಗೂ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗಳಿಗೆ ಸೇರಿದವರೆಂದು ಅವರು ಹೇಳಿದ್ದಾರೆ.
ನಾಗರಿಕರ ಮೇಲೆ ತಪ್ಪಾಗಿ ಬಾಂಬ್ ದಾಳಿ ನಡೆಸಿರುವುದನ್ನು ನೈಜೀರಿಯ ಒಪ್ಪಿಕೊಂಡಿರುವುದು ಇದೇ ಮೊದಲ ಸಲವೆನ್ನಲಾಗಿದೆ. ಕಳೆದ ಕೆಲವು ವಾರಗಳಲ್ಲಿ ನೈಜೀರಿಯ ಸೇನೆಯು ಬೊಕೊ ಹರಾಮ್ ಉಗ್ರರ ವಿರುದ್ಧ ದಾಳಿಯನ್ನು ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ವಾಯು ದಾಳಿ ನಡೆಸಿದೆ. ಬೊರ್ನೊ ರಾಜ್ಯದ ಸಾಬಿಸಾ ಅರಣ್ಯ ಪ್ರದೇಶದಲ್ಲಿದ್ದ ಬೊಕೊ ಉಗ್ರರ ಪ್ರಮುಖ ನೆಲೆಯೊಂದನ್ನು ನೈಜೀರಿಯ ಪಡೆಗಳು ಕಳೆದ ತಿಂಗಳು ವಶಪಡಿಸಿಕೊಂಡಿದ್ದವು.







