105 ಅನಗತ್ಯ ಕಾನೂನುಗಳ ರದ್ದತಿ ಪ್ರಸ್ತಾವನೆಗೆ ಸಂಪುಟದ ಒಪ್ಪಿಗೆ

ಹೊಸದಿಲ್ಲಿ,ಜ.18: ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆಯನ್ನು ತಿದ್ದುಪಡಿಗೊಳಿಸಿದ್ದ ಮತ್ತು ಒಂದು ಕಾಲದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನ ಮತ್ತು ಪಿಂಚಣಿಗಳಿಗೆ ಸಂಬಂಧಿಸಿದ್ದ ಕಾನೂನುಗಳು ಮುಂದಿನ ದಿನಗಳಲ್ಲಿ ರದ್ದಾಗಲಿವೆ.
ಇವೂ ಸೇರಿದಂತೆ ಕಾನೂನು ಪುಸ್ತಕಗಳಲ್ಲಿ ಅಡ್ಡಿಗಳನ್ನುಂಟು ಮಾಡುತ್ತಿರುವ ಅನಗತ್ಯವಾದ 105 ಕಾನೂನುಗಳನ್ನು ರದ್ದುಗೊಳಿಸಲು ರದ್ದತಿ ಮತ್ತು ತಿದ್ದುಪಡಿ ಮಸೂದೆ, 2017 ನ್ನು ತರುವ ಕಾನೂನು ಸಚಿವಾಲಯದ ಪ್ರಸ್ತಾವನೆಗೆ ಕೇಂದ್ರ ಸಂಪುಟವು ಬುಧವಾರ ಹಸಿರು ನಿಶಾನೆಯನ್ನು ತೋರಿಸಿತು.
ಸಂಸತ್ತು ಅಂಗೀಕರಿಸಿರುವ ತಿದ್ದುಪಡಿಗಳನ್ನು ಪ್ರಧಾನ ಕಾಯ್ದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ತಿದ್ದುಪಡಿ ಕಾನೂನುಗಳು ಈಗ ಕಾನೂನು ಪುಸ್ತಕಗಳಲ್ಲಿ ಅಡ್ಡಿಗಳನ್ನುಂಟು ಮಾಡುವ ಅಸ್ಥಿಪಂಜರಗಳಂತಾಗಿದ್ದು, ಇವುಗಳನ್ನು ರದ್ದುಗೊಳಿಸ ಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು, 1824 ಅನಗತ್ಯ ಮತ್ತು ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಲು ಗುರುತಿಸಲಾಗಿತ್ತು. ಈ ಪೈಕಿ 1175 ಕೇಂದ್ರೀಯ ಕಾಯ್ದೆಗಳನ್ನು ರದ್ದುಗೊಳಿಸಲು ಮೇ,2014-ಆ.2016ರ ಅವಧಿಯಲ್ಲಿ ನಾಲ್ಕು ಕಾನೂನುಗಳನ್ನು ತರಲಾಗಿದೆ ಎಂದು ಹೇಳಿದರು.







