ಮಗು ಅಪಹರಣ, ಅಕ್ರಮ ಸಾಗಾಟ ಪ್ರಕರಣ ತಂದೆ ಎನ್ನಲಾದ ವ್ಯಕ್ತಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಪುತ್ತೂರು , ಜ.18 : ಬಂಟ್ವಾಳ ತಾಲೂಕಿನ ಪೆರ್ನೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾಗಿದ್ದ ‘ಮಗು ಅಪಹರಣ-ಅಕ್ರಮ ಸಾಗಾಟ’ ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಂದೆ ಎಂದು ಹೆಸರಿಸಲಾಗಿರುವ ಆರೋಪಿ ಬೆಂಗಳೂರಿನ ಜಲಾಲು ಯಾನೆ ಜಲಾಲುದ್ದೀನ್ ಎಂಬಾತ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಜಿಲ್ಲಾ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
2016ರ ನವೆಂಬರ್‌ನಲ್ಲಿ ಬೆಂಗಳೂರಿನ ಎಚ್.ಬಿ.ಆರ್. ಲೇ ಔಟ್‌ನ ಹೆಣ್ಣೂರು ನಿವಾಸಿ ಮುಹಮ್ಮದ್ ಉಜೈಫ್ (27), ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಆನಡ್ಕದ ನಿವಾಸಿ ಶಿಯಾಬುದ್ದೀನ್ ಅಹಮ್ಮದ್ (27) ಹಾಗೂ ಹಿರೇಬಂಡಾಡಿಯ ಅಡೆಕ್ಕಲ್‌ನ ಕೋಲಾಡಿ ನಿವಾಸಿ ಮುಹಮ್ಮದ್ ಶಬೀರ್ (21) ಎಂಬವರು 58 ದಿನ ಪ್ರಾಯದ ಗಂಡು ಮಗುವೊಂದನ್ನು ತಂದು ಪೆರ್ನೆಯ ಬಾಡಿಗೆ ಮನೆಯೊಂದರಲ್ಲಿ ಸಾಕಲೆತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಈ ಮೂವರನ್ನು ಹಾಗೂ ಅವರೊಂದಿಗಿದ್ದ ಮಗುವನ್ನು ವಶಕ್ಕೆ ತೆಗೆದುಕೊಂಡಿದ್ದರು.
ಪೊಲೀಸರ ವಿಚಾರಣೆಯ ವೇಳೆ ಆರೋಪಿಗಳು ಈ ಮಗುವಿನ ತಾಯಿ ನೇಪಾಳಿಯಾಗಿದ್ದು, ಅವರು ಅವರ ಊರಿಗೆ ತೆರಳಿದ ಕಾರಣ ಒಂದು ತಿಂಗಳ ಮಟ್ಟಿಗೆ ಮಗುವನ್ನು ಆರೈಕೆ ಮಾಡಲು ಮಗುವಿನ ತಂದೆ ನಮ್ಮಲ್ಲಿ ವಿನಂತಿಸಿರುವ ಕಾರಣದಿಂದ ಈ ಮಗುವನ್ನು ತಂದಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮಗು ಜನನದ ಬಗ್ಗೆ ಆಸ್ಪತ್ರೆಯಲ್ಲಿ ನೀಡಿದ ದಾಖಲೆ ಕಾರ್ಡನ್ನು ತೋರಿಸಿದ್ದರು. ಅದರಲ್ಲಿ ಮಗುವಿನ ತಾಯಿಯ ಹೆಸರು ಕರೀಷ್ಮಾ ಎಂದಿದ್ದರೆ, ತಂದೆಯ ಹೆಸರು ಬೆಂಗಳೂರಿನ ಜಲಾಲು ಯಾನೆ ಜಲಾಲುದ್ದೀನ್ ಎಂದಿತ್ತು. ಆದರೆ ಈ ಯುವಕರು ನೀಡಿದ ವ್ಯತಿರಿಕ್ತ ಹೇಳಿಕೆಯಿಂದ ಸಂಶಯಗೊಂಡಿದ್ದ ಪೊಲೀಸರು ಮರುದಿನ ಹಸುಗೂಸಿನೊಂದಿಗಿದ್ದ ಯುವಕರನ್ನು ಬಂಧಿಸಿ ಅವರ ವಿರುದ್ದ ಮಗು ಅಪಹರಣ ಹಾಗೂ ಅಕ್ರಮ ಸಾಗಾಟ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಮಹಮ್ಮದ್ ಉಜೈಫ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ಮಗುವಿನ ನೈಜ ಹೆತ್ತವರನ್ನು ಪತ್ತೆ ಹಚ್ಚಲು ಬೆಂಗಳೂರಿಗೆ ತೆರಳಿದ್ದರು. ಆ ವೇಳೆ ಮಗುವಿನ ತಂದೆ ಎನ್ನಲಾದ ಜಲಾಲು ಯಾನೆ ಜಲಾಲುದ್ದೀನ್ ಎಂಬಾತನ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಆತನ ಪತ್ತೆಯಾಗಿರಲಿಲ್ಲ.
ಈ ನಡುವೆ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿದ್ದ ಮುಹಮ್ಮದ್ ಉಜೈಫ್, ಮುಹಮ್ಮದ್ ಶಬೀರ್ ಹಾಗೂ ಶಿಯಾಬುದ್ದೀನ್ ಅಹಮ್ಮದ್ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಇದೀಗ ಮಗುವಿನ ತಂದೆ ಎಂದು ಹೆಸರಿಸಲಾಗಿರುವ ಜಲಾಲು ಯಾನೆ ಜಲಾಲುದ್ದೀನ್ ಎಂಬಾತ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಜಿಲ್ಲಾ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.







