ನೋಟು ಬ್ಯಾನ್‌ಗೆ ವಿರೋಧ, ಅಡಿಕೆ ಬೆಂಬಲ ಖರೀದಿಗೆ ಒತ್ತಾಯ ಕ್ಯಾಂಪ್ಕೋ ಎದುರಿನ ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಸಮಾಪ್ತಿ
ಸುಳ್ಯ , ಜ.18 : ಪ್ರಧಾನಿ ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದ್ದರಿಂದ ದೇಶದ ಜನರಿಗೆ ಆಗಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯ ಕ್ಯಾಪ್ಕೋ ಕಚೇರಿ ಎದುರು ನಡೆದ ಉಪವಾಸ ಸತ್ಯಾಗ್ರಹ ಕೊನೆಗೊಂಡಿದೆ.
ಮಂಗಳವಾರ ಸಂಜೆ ವೇಳೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ನೇತೃತ್ವ ವಹಿಸಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರಿಗೆ ಪಾನೀಯ ಕುಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಚಿವ ಆಂಜನೇಯ, ಭಾರತದಲ್ಲಿ ಹಿಂದೆಂದೂ ಕಂಡರಿಯದ ಸರ್ವಾಧಿಕಾರ ಧೋರಣೆ ಕಾಣುತ್ತಿದೆ. ಕಪ್ಪು ಹಣ ಮಟ್ಟ ಹಾಕಲು ಹೊರಟವರು ಬಡವರ ಹಣ ನೀಡದೇ ಕಷ್ಟಕೊಡುತ್ತಿದ್ದಾರೆ. ಇದರಿಂದಾಗಿ ಮುಂದೆ ಕಾಂಗ್ರೆಸ್ ಪಾಲಿಗೆ ಅಚ್ಚೇ ದಿನ್ ಬರಲಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸತ್ಯಾಗ್ರಹ ಸ್ಥಳಕ್ಕೆ ಕ್ಯಾಂಪ್ಕೋ ಅಧಿಕಾರಿಗಳು ಬರಲಿಲ್ಲವೆಂದು ಪ್ರತಿಭಟನಾಕಾರರು ಎ.ಪಿ.ಯಂ.ಸಿ. ಸ್ವಾಗತ ದ್ವಾರದ ಬಳಿ ಧರಣಿ ಕುಳಿತರು.
ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದ ಘಟನೆಯೂ ನಡೆಯಿತು.







