ಸಂಸದೀಯ ಸಮಿತಿಯ ಮುಂದೆ ರಿಸರ್ವ್ ಬ್ಯಾಂಕ್ ನ ಮಾನ ಕಾಪಾಡಿದ ಮನಮೋಹನ್ ಸಿಂಗ್
ಹಾಲಿ ಗವರ್ನರ್ ರನ್ನು ಮಾಜಿ ಗವರ್ನರ್ ಬಚಾವ್ ಮಾಡಿದ್ದು ಹೇಗೆ ?

ಹೊಸದಿಲ್ಲಿ,ಜ.18: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಧ್ಯಪ್ರವೇಶದಿಂದಾಗಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಬುಧವಾರ ನೋಟು ರದ್ದತಿ ವಿಷಯದಲ್ಲಿ ಸಂಸದೀಯ ಸಮಿತಿಯ ಸಂಭಾವ್ಯ ವಿಚಾರಣೆಯಿಂದ ಪಾರಾದರು.
ಇತರ ಆರ್‌ಬಿಐ ಮತ್ತು ವಿತ್ತ ಸಚಿವಾಲಯದ ಅಧಿಕಾರಿಗಳೊಂದಿಗೆ ಹಣಕಾಸು ಕುರಿತ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದ ಪಟೇಲ್ ಅವರಿಗೆ ಸಮಿತಿಯ ಸದಸ್ಯರು ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದ್ದರು ಎಂದು ಸಮಿತಿಯಲ್ಲಿನ ಮೂಲಗಳು ತಿಳಿಸಿದವು.
ಬ್ಯಾಂಕಿಂಗ್ ವ್ಯವಸ್ಥೆ ಸಹಜ ಸ್ಥಿತಿಗೆ ಎಂದು ಮರಳುತ್ತದೆ ಮತ್ತು ನೋಟು ರದ್ದತಿಯ ನಂತರದ 50 ದಿನಗಳ ಅವಧಿಯಲ್ಲಿ ಎಷ್ಟು ಹಳೆಯ ನೋಟುಗಳು ವಾಪಸ್ ಬಂದಿವೆ ಎಂಬಂತಹ ಪ್ರಶ್ನೆಗಳಿಗೆ ಉತ್ತರಿಸಲು ಪಟೇಲ್‌ಗೆ ಸಾಧ್ಯವಾಗಲಿಲ್ಲ.
ಇನ್ನಷ್ಟು ವಿಚಾರಣೆ ಆರಂಭಗೊಳ್ಳುವ ಮುನ್ನ, ರಾಜ್ಯಸಭೆಯಲ್ಲಿ ನೋಟು ರದ್ದತಿಯನ್ನು ವಿರೋಧಿಸಿ ತೀಕ್ಷ್ಣ ಭಾಷಣವನ್ನು ಮಾಡಿದ್ದ ಮನಮೋಹನ್ ಸಿಂಗ್ ಅವರು ಮಧ್ಯಪ್ರವೇಶಿಸಿ, ಒಂದು ಸಂಸ್ಥೆಯಾಗಿ ಆರ್‌ಬಿಐ ಮತ್ತು ಗವರ್ನರ್ ಹುದ್ದೆಯನ್ನು ಗೌರವಿಸಬೇಕು ಎಂದು ಹೇಳಿದರು.
ಅವರಿಗೆ ವಕ್ರಪ್ರಶ್ನೆಗಳನ್ನು ಕೇಳಬಾರದು ಎಂದು ಒಮ್ಮೆ ಸ್ವತಃ ಆರ್‌ಬಿಐ ಗವರ್ನರ್ ಆಗಿದ್ದ ಸಿಂಗ್ ಸಮಿತಿಗೆ ತಿಳಿಸಿದರೆಂದು ಮೂಲಗಳು ಹೇಳಿದವು.
ಬ್ಯಾಂಕುಗಳಿಂದ ಹಣ ಹಿಂದೆಗೆಯುವಿಕೆಯ ಮೇಲಿನ ನಿರ್ಬಂಧಗಳು ಮುಂದುವರಿದಿರುವುದಕ್ಕೆ ಸಂಬಂಧಿಸಿದಂತೆ ಸಮಿತಿಯ ಸದಸ್ಯರೋರ್ವರು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಬೇಕಾಗಿಲ್ಲ ಎಂದು ಸಿಂಗ್ ಪಟೇಲ್‌ಗೆ ತಿಳಿಸಿದರೆನ್ನಲಾಗಿದೆ.
ಚಂದಾ ಕೊಚ್ಚಾರ್(ಐಸಿಐಸಿಐ) ಮತ್ತು ಉಷಾ ಅನಂತಸುಬ್ರಮಣಿಯನ್ (ಪಿಎನ್‌ಬಿ)ಸೇರಿದಂತೆ ಬ್ಯಾಂಕರ್‌ಗಳೂ ಸಮಿತಿಯ ಮುಂದೆ ಹಾಜರಾಗಿದ್ದರು.
ಇದೇ ವಿಷಯದಲ್ಲಿ ಪಟೇಲ್ ಅವರು ಜ.20ರಂದು ಸಾರ್ವಜನಿಕ ಲೆಕ್ಕಪತ್ರಗಳ ಕುರಿತ ಸಂಸದೀಯ ಸಮಿತಿಯ ಎದುರೂ ಹಾಜರಾಗಬೇಕಿದೆ.







