ಅತ್ಯಾಚಾರ ಪ್ರಕರಣ
ಸಿಗದ ಯುವತಿಯರ ಸುಳಿವು
ಶಿವಮೊಗ್ಗ, ಜ. 18: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಹಣಗೆರೆಯಲ್ಲಿ ಯುವ ತಿಯರ ಅತ್ಯಾಚಾರಕ್ಕೆ ನಡೆದ ವಿಫಲ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ದೌರ್ಜನ್ಯಕ್ಕೊಳಗಾಗಿ ನಾಪತ್ತೆಯಾಗಿರುವ ಯುವತಿಯರು ದಾವಣಗೆರೆ ಮೂಲದವರೆಂದು ತಿಳಿದುಬಂದಿದೆ. ಯುವತಿಯರ ಅತ್ಯಾಚಾರಕ್ಕೆ ಯತ್ನ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೊಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಲ್ಲಿ ಓರ್ವ ಶಿವಮೊಗ್ಗ ನಗರದವನಾಗಿದ್ದರೆ, ಮತ್ತೋರ್ವ ಹಣಗೆರೆಯವನಾಗಿದ್ದಾನೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸೋಮವಾರ ಮುಂಜಾನೆಯ ವೇಳೆ ಯುವತಿಯರ ಅತ್ಯಾಚಾರಕ್ಕೆ ಯುವಕರ ಗುಂಪೊಂದು ಯತ್ನಿಸಿತ್ತು. ಘಟನೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಮಾಳೂರು ಠಾಣೆ ಸಬ್ ಇನ್‌ಸ್ಪೆೆಕ್ಟರ್ ಗುರುರಾಜ್ ಹಣಗೆರೆಕಟ್ಟೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ತದನಂತರ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು.
ಮತ್ತೊಂದೆಡೆ ಈ ಘಟನೆಯ ನಂತರ ಇಬ್ಬರು ಯುವತಿಯರು ಹಣಗೆರೆಕಟ್ಟೆಯಲ್ಲಿ ಕೆಲ ಸಮಯವಿದ್ದು, ತದನಂತರ ಅಲ್ಲಿಂದ ನಿಗೂಢವಾಗಿ ಕಣ್ಮರೆಯಾಗಿದ್ದರು. ಅವರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ಇದೆಲ್ಲದರ ನಡುವೆ ಯುವತಿಯರನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದು, ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಮೊದಲು ಯುವತಿಯರು ಶಿವಮೊಗ್ಗದವರೆಂದು ಹೇಳಲಾಗಿತ್ತಾದರೂ, ಇದೀಗ ಅವರು ದಾವಣಗೆರೆ ಮೂಲದವರೆಂದು ತಿಳಿದುಬಂದಿದೆ. ಅವರಿಬ್ಬರು ತಮ್ಮ ಊರಿಗೆ ಹಿಂದಿರುಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.





