ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಗೆ ವಿಶೇಷ ಬಲ ನೀಡಬೇಕಿದೆ : ಡಾ.ಮೋಹನ ಆಳ್ವ

ಉಡುಪಿ, ಜ.18: ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಎಸ್ಸೆಸೆಲ್ಸಿ ಮಕ್ಕಳಿಗೆ ನಾವು ವಿಶೇಷ ಗಮನ ನೀಡಬೇಕಿರುವುದು ಇಂದಿನ ಅಗತ್ಯ. ರಾಜ್ಯದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದಾಗ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಗುರುತರವಾದ ಜವಾಬ್ದಾರಿ ಇರುವುದು ಅರಿವಿಗೆ ಬರುತ್ತದೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅ್ಯಧ್ಯಕ್ಷ ಡಾ.ಮೋಹನ ಆಳ್ವ ಹೇಳಿದ್ದಾರೆ.
ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮುಖ್ಯೋಪಾಧ್ಯಾಯರ ಕಾರ್ಯಗಾರದಲ್ಲಿ ಶಿಕ್ಷಕ ಮಹಾಬಲೇಶ್ವರ ಭಾಗವತ್ ಹಾಗೂ ನಟರಾಜ್ ಸಿದ್ಧಪಡಿಸಿದ ಸಾಮಾನ್ಯ ವಿಜ್ಞಾನ ಕೈಪಿಡಿ ‘ನಮ್ಮ ಸಂಕಲ್ಪ’ ವನ್ನು ಬಿಡುಗಡೆಗೊಳಿಸಿ, ಆಳ್ವಾಸ್ ಸಂಸ್ಥೆ ಹೊರತಂದಿರುವ ವಿವಿಧ ವಿಷಯಗಳ ಕೈಪಿಡಿಯನ್ನು ಎಲ್ಲ ಮುಖ್ಯೋಪಾಧ್ಯಾಯರಿಗೆ ಉಚಿತವಾಗಿ ವಿತರಿಸಿ ಮಾತನಾಡುತಿದ್ದರು.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಡುಪಿ ಜಿಲ್ಲೆ ಯಾವಾಗಲೂ ಎಸ್ಸೆಸೆಲ್ಸಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ ಎಂದ ಡಾ.ಆಳ್ವ, ಈ ಸಾಲಿನಲ್ಲಿಯೂ ವಿಶೇಷ ಸಾಧನೆ ಮಾಡಲು ತಯಾರಿ ನಡೆಸುತ್ತಿರುವ ಜಿಲ್ಲೆಯ ವಿದ್ಯಾಂಗ ಉಪನಿರ್ದೇಶಕರ ನಾಯಕತ್ವದ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಶುಭ ಕೋರಿದರು.
ಜಿಲ್ಲಾ ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷ ದಿನಕರ ಆರ್. ಶೆಟ್ಟಿ, ಉದ್ಯಮಿ ನವೀನ್ ಹೆಗ್ಡೆ ಉಪಸ್ಥಿತರಿದ್ದರು.
ವಳಕಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ನಳಿನಿ ರಾವ್ ವಂದಿಸಿದರು. ಶಿಕ್ಷಕ ಚಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.







