ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡು
ಕಾಫಿ ಬೆಳೆ ನಾಶ; ಅಪಾರ ನಷ್ಟ ಕೆಲಸ ಸ್ಥಗಿತಗೊಳಿಸಿದ ಕಾರ್ಮಿಕರು ಬೆಳೆಗಾರರಲ್ಲಿ ಆತಂಕ
ಸಿದ್ದಾಪುರ, ಜ.18: ಸಮೀಪದ ಮಾಲ್ದಾರೆ ಹಾಗೂ ಘಟ್ಟದ್ದಳ ಸುತ್ತ ಮುತ್ತಲಿನ ಕಾಫಿ ತೋಟಗಳಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಭಯಭೀತರಾಗಿರುವ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಮನೆಗೆ ಹಿಂತಿರುಗಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರತ್ಯಕ್ಷಗೊಂಡ ಕಾಡಾನೆಯ ಹಿಂಡಿನ ಬಗ್ಗೆ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ತೋಟಗಳಲ್ಲಿ ಪರಿಶೀಲನೆ ನಡೆಸಿ ಕಾಡಾನೆಗಳ ಇರುವಿಕೆಯನ್ನು ಖಾತರಿ ಪಡಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಳಿಕ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಮುಂದಾದರು. ಆದರೆ, ಕಾಡಾನೆಗಳ ಹಿಂಡು ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿದ್ದವು. ಇದರಿಂದ ಅರಣ್ಯಾಧಿಕಾರಿಗಳು ಪರದಾಡುವಂತಾಯಿತು.
ಬುಧವಾರವೂ ಆನೆ ಓಡಿಸುವ ಕಾರ್ಯಾಚರಣೆ ಮುಂದುವರಿದಿದ್ದು ಭಯಭೀತರಾಗಿರುವ ಕಾಫಿ ತೋಟದ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕಾಫಿ ಗಿಡಗಳನ್ನು ಕಿತ್ತು ಹಣ್ಣುಗಳನ್ನು ಚಪ್ಪರಿಸಿರುವುದರಿಂದ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಾಫಿ ಕೊಯ್ಲು ಸಮಯವಾಗಿರುವುದರಿಂದ ಬೆಳೆಗಾರರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.ಕೂಡಲೆ ಅರಣ್ಯ ಇಲಾಖೆ ಹಾಗೂ ಸರಕಾರ ಕಾಡಾನೆಗಳನ್ನು ಕಾಡಿಗೆ ಓಡಿಸಲು ಮುಂದಾಗಬೇಕೆಂದು ಬೆಳೆಗಾರರು ಮತ್ತು ಕಾರ್ಮಿಕರು ಒತ್ತಾಯಿಸಿದ್ದಾರೆ.







