ಶೃಂಗೇರಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಜತ ಮಹೋತ್ಸವ

ಸಂಸ್ಕೃತಿ ಉಳಿಸಿ ಬೆಳೆಸಲು ರಾಜ್ಯಪಾಲ ವಜೂಭಾಯಿವಾಲಾ ಕರೆ
ಚಿಕ್ಕಮಗಳೂರು, ಜ.18: ಪ್ರತಿಯೊಂದು ದೇಶಕ್ಕೆ ಅದರದ್ದೇ ಆದ ಸಂಸ್ಕೃತಿ ಇರುತ್ತದೆ. ರಾಷ್ಟ್ರದ ಜನತೆ ಅದನ್ನು ಕಾಪಾಡಿಕೊಳ್ಳುವ ಮೂಲಕ ಉಳಿಸಿ ಬೆಳೆಸಬೇಕು. ಇಲ್ಲವಾದರೆ ಅದು ಮುಂದಿನ ಪೀಳಿಗೆಗೆ ಇಲ್ಲವಾಗುವ ಜೊತೆಗೆ ಆ ದೇಶದ ಭವಿಷ್ಯವನ್ನು ಮಂಕುಗೊಳಿಸುತ್ತದೆ ಎಂದು ಕರ್ನಾಟಕ ಸರಕಾರದ ರಾಜ್ಯಪಾಲ ವಜೂಭಾಯಿವಾಲಾ ತಿಳಿಸಿದರು.
ಅವರು ಬುಧವಾರ ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಾಜೀವ್ ಗಾಂಧಿ ಪರಿಸರ ಸಭಾಂಗಣದಲ್ಲಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಜತ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು.
ನೆಲದ ಸಂಸ್ಕೃತಿ ನಾಶವಾದರೆ ದೇಶದ ಸಂಸ್ಕೃತಿಯು ನಾಶವಾಗುತ್ತದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ಎಂದರೆ ಕೇವಲ ಧಾರ್ಮಿಕದ ಆಚರಣೆ ಅಷ್ಟೇ ಅಲ್ಲ. ಸತ್ಯ ಹಾಗೂ ಪ್ರಮಾಣಿಕತೆಯಿಂದ ನಡೆದುಕೊಳ್ಳುವುದು ಮಾನವೀಯತೆಯಿಂದ ವರ್ತಿಸುವುದೇ ನಿಜವಾದ ಧರ್ಮ. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೃಂಗೇರಿ ಶಾರದ ಪೀಠದ ಭಾರತೀತೀರ್ಥ ಸ್ವಾಮೀಜಿ, ಇಂದು ವೈದೇಶಿಕ ಸಂಸ್ಕೃತಿಯ ಅನುಕರಣೆಯನ್ನು ಬಿಟ್ಟು ವೇದ ಶಾಸ್ತ್ರಗಳ ಪುನರಧ್ಯಯನದ ಅಗತ್ಯವಿದೆ. ಇಂದಿನ ಪೀಳಿಗೆಯ ಜನರು ವೈದೇಶಿಕ ಸಂಸ್ಕೃತಿಯ ಅನುಕರಣೆಗೆ ಮಾರು ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದರು.
ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಒಂದು ಕಾಲದಲ್ಲಿ ಭಾರತೀಯ ಭಾಷೆ ಸಂಸ್ಕೃತವಾಗಿತ್ತು. ಜನಸಾಮಾನ್ಯರು ತಮ್ಮ ದೈನಂದಿನ ವ್ಯವಹಾರಗಳನ್ನು ಸಂಸ್ಕೃತ ಬಾಷೆಯಲ್ಲಿಯೇ ಮಾಡುತ್ತಿದ್ದರು ಕಾಲ ಕ್ರಮೇಣ ಸಂಸ್ಕೃತ ಭಾಷೆ ದೂರವಾಗಿರುವುದು ಬೇಸರದ ಸಂಗತಿ ಎಂದರು.
ಕರ್ನಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ ಭಟ್ ಮತ್ತು ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜತ ಮಹೋತ್ಸವದ ಸ್ಮರಣೆಗಾಗಿ ನಿರ್ಮಿಸಲ್ಪಡುವ ರಜತ ಮಹೋತ್ಸವ ಭವನದ ಶಿಲಾನ್ಯಾಸವನ್ನು ಭಾರತೀತೀರ್ಥಮಹಾಸ್ವಾಮೀಜಿ ನೆರವೇರಿಸಿದರು.
ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಪದ್ಧತಿಗಳನ್ನು ನಾವು ಅಳವಡಿಸಿ ಕೊಳ್ಳುವುದು. ಗ್ರಹಗಳ ಗತಿಗಳ ಕಾಲದಲ್ಲಿ ಯಾವುದೇ ವೈಜ್ಞಾನಿಕ ಪದ್ಧತಿ ಇಲ್ಲದೇ ಅದರ ಬಗ್ಗೆ ತಿಳಿಸಿದ್ದರು. ಅವರ ವೈಜ್ಞಾನಿಕ ಚಿಂತನೆ ಈಗಿನ ಕಂಪ್ಯೂಟರ್‌ಗಿಂತ ಉತ್ತಮವಾಗಿತ್ತು. ಪ್ರತಿ ಜಿಲ್ಲೆಯಲ್ಲೂ ಸಂಸ್ಕೃತ ಪಾಠ ಶಾಲೆ ತೆರೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗುವುದು. ಸಂಸ್ಕೃತ ಕಲಿಕೆ ಎಂದರೆ ಕೇವಲ ಅಕ್ಷರಗಳ ಕಲಿಕೆಯಲ್ಲ. ಸಂಸ್ಕೃತಿ ಮತ್ತು ಸಂಸ್ಕಾರಗಳ ಸಮ್ಮಿಲನವಾಗಿದೆ. ಯುವಜನತೆ ಸಂಸ್ಕೃತ ಭಾಷೆ ಕಲಿಯಲು ಆಸಕ್ತಿ ತೋರಬೇಕು.
ವಜೂಭಾಯಿವಾಲಾ, ರಾಜ್ಯಪಾಲ ಕಾರ್ಯಕ್ರಮದಲ್ಲಿ ಶಾಸಕ ಡಿ.ಎನ್.ಜೀವರಾಜ್, ಕುಲಪತಿ ಪರಮೇಶ್ವರ್ ನಾರಾಯಣ ಶಾಸ್ತ್ರಿ, ಗುರುಸೇವಾಧುರೀಣ ಪದ್ಮಶ್ರೀ ಡಾ.ವಿ.ಆರ್. ಗೌರೀಶಂಕರ್, ಜಿಲ್ಲಾಧಿಕಾರಿಗಳಾದ ಸತ್ಯವತಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಕುಲಪತಿ ಪ್ರೊ. ಪಿ.ಎನ್.ಶಾಸ್ತ್ರಿ, ಪ್ರಾಂಶುಪಾಲ ಪ್ರೊ. ಎ.ಪಿ.ಸಚ್ಚಿದಾನಂದ ಉಪಸ್ಥಿತರಿದ್ದರು.







