ಮೀನುಗಾರಿಕೆ ನಿಗಮದಿಂದ ವಾರ್ಷಿಕ 12 ಕೋ.ರೂ. ವ್ಯವಹಾರ : ನಿಗಮದ ಅಧ್ಯಕ್ಷ ವಿ.ಕೆ.ಶೆಟ್ಟಿ
.jpg)
ಮಂಗಳೂರು, ಜ. 18: ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಮೀನು ಮಾರಾಟ ಕೇಂದ್ರ ಮತ್ತು ಮೀನಿನ ವೌಲ್ಯವರ್ಧಿತ ಉತ್ಪನ್ನಗಳಿಂದ ವಾರ್ಷಿಕ 12 ಕೋಟಿ ರೂ. ವ್ಯವಹಾರ ನಡೆಸುತ್ತಿದೆ ಎಂದು ನಿಗಮದ ಅಧ್ಯಕ್ಷ ವಿ.ಕೆ.ಶೆಟ್ಟಿ ಹೇಳಿದ್ದಾರೆ.
ಎಕ್ಕೂರು ಮೀನುಗಾರಿಕೆ ಕಾಲೇಜಿನ ಪ್ರೊ.ಎಚ್‌ಪಿಸಿ ಶೆಟ್ಟಿ ಸಭಾಂಗಣದಲ್ಲಿ ಬುಧವಾರ ಮೀನಿನ ಉತ್ಪನ್ನಗಳ ತಯಾರಿಕೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮೀನು ಹಾಗೂ ಮೀನು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಹಸಿ ಮೀನು ಮಾರಾಟದಿಂದ ಹೆಚ್ಚಿನ ಲಾಭ ನಿರೀಕ್ಷಿಸುವಂತಿಲ್ಲ. ಆದರೆ, ಮೀನಿನ ಉಪ್ಪಿನಕಾಯಿ, ಒಣಮೀನು ಪ್ಯಾಕೇಟ್, ಫ್ರೈ ಇತ್ಯಾದಿಗಳಿಗೆ ಉತ್ತಮ ಬೆಲೆ ಇದೆ. ಅದರ ಉತ್ಪಾದನೆಗೆ ಬ್ಯಾಂಕ್ ಸಾಲ, ಸೂಕ್ತ ತರಬೇತಿ ಸಿಗುತ್ತಿದೆ ಎಂದು ಅವರು ಹೇಳಿದರು. ಮೀನುಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ಮೀನು ಪ್ರೊಟೀನ್‌ಯುಕ್ತ ಆಹಾರವಾಗಿದ್ದು, ದೇಹದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 100 ಗ್ರಾಂ ಮೀನು, ಅರ್ಧ ಲೀ. ಹಾಲು ಸೇವನೆಗೆ ಸಮ. ಹಾಗೆಯೇ ಮೂರು ಮೊಟ್ಟೆ, 165 ಗ್ರಾಂ ಗೋಧಿ, 285 ಗ್ರಾಂ ಅಕ್ಕಿಯ ವಸ್ತು ಸೇವನೆಗೆ ಸಮ. ಮಗುವಿನ ಮೆದುಳಿನ ಬೆಳವಣಿಗೆಗೆ ಮೀನು ಉತ್ತಮ ಆಹಾರ ಎಂದರು.
ಮೀನುಗಾರಿಕೆ ಕಾಲೇಜಿನ ಡೀನ್ ಡಾ.ಎಂ.ಎನ್. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಮೀನುಗಾರಿಕೆ ಕಾಲೇಜಿನ ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸಿ.ವಿ.ರಾಜು ಉಪಸ್ಥಿತರಿದ್ದರು.
ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಬೀದರ್‌ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮತ್ತು ಅಖಿಲ ಭಾರತ ಕೋಯ್ಲೋತ್ತರ ಸಂಸ್ಕರಣೆ ಸಂಘಟಿತ ಸಂಶೋಧನೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಸ್ವಾಗತಿಸಿದರು.
ವಿಜ್ಞಾನಿ ಅಣ್ಣಪ್ಪಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.







