ಮಲೇಷ್ಯಾ ಮಾಸ್ಟರ್ಸ್: ಸೈನಾ, ಜಯರಾಮ್ ಪ್ರಿ-ಕ್ವಾರ್ಟರ್ಫೈನಲ್ಗೆ
ಹೊಸದಿಲ್ಲಿ, ಜ.18: ವರ್ಷದ ಮೊದಲ ಗ್ರಾನ್ಪ್ರಿ ಗೋಲ್ಡ್ ಟೂರ್ನಿ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಭಾರತದ ಅಗ್ರಮಾನ್ಯ ಶಟ್ಲರ್ಗಳಾದ ಸೈನಾ ನೆಹ್ವಾಲ್ ಹಾಗೂ ಅಜಯ್ ಜಯರಾಮ್ ಪ್ರಿ-ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಈ ಇಬ್ಬರು ಬುಧವಾರ ನಡೆದ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಜಯಶಾಲಿಯಾಗಿದ್ದರು.
ಮಂಡಿ ಸರ್ಜರಿಯಿಂದ ಚೇತರಿಸಿಕೊಂಡಿರುವ ಅಗ್ರ ಶ್ರೇಯಾಂಕಿತೆ ಸೈನಾ ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಥಾಯ್ಲೆಂಡ್ನ ಚಾಸಿನೀ ಕಾರೆಪಾಪ್ರನ್ನು 21-9, 21-8 ಗೇಮ್ಗಳ ಅಂತರದಿಂದ ಮಣಿಸಿದರು.
ಕಳೆದ ವರ್ಷ ಮಂಡಿನೋವಿಗೆ ತುತ್ತಾಗುವ ಮೊದಲು ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ 26ರ ಹರೆಯದ ಸೈನಾ ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ಹನ್ನಾ ರಮಾದಿನಿ ಅವರನ್ನು ಎದುರಿಸಲಿದ್ದಾರೆ.
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ಆರನೆ ಶ್ರೇಯಾಂಕದ ಅಜಯ್ ಜಯರಾಮ್ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜುನ್ ಹಾವೊ ಲಿಯೊಂಗ್ರನ್ನು 21-10, 17-21, 21-14 ಗೇಮ್ಗಳ ಅಂತರದಿಂದ ಮಣಿಸಿದರು.
ಎರಡನೆ ಸುತ್ತಿನಲ್ಲಿ ಇಂಡೋನೇಷ್ಯಾದ ಸಪುತ್ರ ವಿಕಿ ಅಂಗಾರನ್ನು 21-9, 21-12 ಗೇಮ್ಗಳ ಅಂತರದಿಂದ ಸೋಲಿಸಿದರು. ವಿಶ್ವದ ನಂ.19ನೆ ಆಟಗಾರ ಜಯರಾಮ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಸು ಸುಯಾನ್ ಯಿ ಅವರನ್ನು ಎದುರಿಸಲಿದ್ದಾರೆ.
ಮತ್ತೊಂದು ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಹೇಮಂತ್ ಎಂ.ಗೌಡ ಅವರು ಚೈನೀಸ್ ತೈಪೆಯ ಚುನ್-ವೀ-ಚೆನ್ ವಿರುದ್ಧ 5-21, 19-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಮಿಶ್ರ ಡಬಲ್ಸ್ನಲ್ಲಿ ಭಾರತದ ಹೊಸ ಜೋಡಿ ಮನು ಅತ್ರಿ ಹಾಗೂ ಜ್ವಾಲಾ ಗುಟ್ಟಾ ಇಂಡೋನೇಷ್ಯಾದ ಲುಖಿ ಅಪ್ರಿ ಹಾಗೂ ರಿರಿನ್ ಅಮೆಲಿಯಾರನ್ನು 21-19, 21-18 ಗೇಮ್ಗಳ ಅಂತರದಿಂದ ಸೋಲಿಸಿದರು.
ಇದೇ ವೇಳೆ, ಸುಮಿತ್ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಮಿಶ್ರ ಡಬಲ್ಸ್ನಲ್ಲಿ ಇಂಡೋನೇಷ್ಯಾದ ಟಿ.ಅಹ್ಮದ್ ಹಾಗೂ ಗ್ಲೊರಿಯಾ ಇಮ್ಯಾನುಯೆಲ್ ವಿರುದ್ಧ 17-21, 17-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.