ಪುತ್ತೂರು : ತಾಲೂಕು ಮಟ್ಟದ "ಯುವಸಪ್ತಾಹ" ಸಮಾರೋಪ

ಪುತ್ತೂರು , ಜ.18 : ಭಾರತದ ಸಂಸ್ಕೃತಿಯ ಅಗಾಧ ಜ್ಞಾನ ಹೊಂದಿದ ವಿವೇಕಾನಂದರು ವಿದೇಶಗಳಿಗೆ ಭಾರತದ ಬಗ್ಗೆ ಒಂದು ಉತ್ತಮ ಚಿತ್ರಣ ನೀಡಿದ ವೀರಸಂತ. ಅಸಾಧ್ಯವೆಂಬುದು ಜಗತ್ತಿನಲ್ಲಿ ಇಲ್ಲ. ಆದ್ಧರಿಂದ ಯುವಜನತೆ ಪ್ರಯತ್ನಿಸಿದರೆ ಯಾವುದೇ ಸಾಧನೆ ಮಾಡಬಲ್ಲರು. ಯುವಜನತೆ ದೇಶವನ್ನು ಉತ್ತಮವಾಗಿ ಕಟ್ಟಬಲ್ಲರು ಎಂದು ನಂಬಿದ ಅವರು, ಯುವಜನರು ಯಾವ ರೀತಿ ಭವಿಷ್ಯವನ್ನು ನಿರ್ಮಿಸಿಕೊಡಬೇಕೆಂದು ತಿಳಿಸಿಕೊಟ್ಟವರು ಎಂದು ನಿವೃತ್ತ ಶಿಕ್ಷಕ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಸುರೇಶ್ ಶೆಟ್ಟಿ ತಿಳಿಸಿದರು.
ಅವರು ಬುಧವಾರ ಸರಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಯುವಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ನುಡಿದಂತೆ ನಡೆದ ಮಹಾನ್ ಚೇತನ. ಅವರೊಬ್ಬ ಪ್ರೇರಣಾಮೂರ್ತಿ, ಅವರ ಪುಸ್ತಕಗಳನ್ನು ಇಂದಿನ ಯುವಜನತೆ ಓದುವುದು ಅವಶ್ಯಕ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜ್‌ನ ಪ್ರಭಾರ ಪ್ರಾಂಶುಪಾಲ ಡಾ.ಕೃಷ್ಣಪ್ಪ ಮಡಿವಾಳ ಮಾತನಾಡಿ, ವಿವೇಕಾನಂದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವೆಲ್ಲ ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವ. ಅವರ ಕನಸಿನ ಭಾರತವನ್ನು ನಾವೆಲ್ಲರೂ ಸೇರಿ ನಿರ್ಮಾಣ ಮಾಡುವತ್ತ ಮುನ್ನಡೆಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವಸಪ್ತಾಹದ ಅಂಗವಾಗಿ ತಾ. ಮಟ್ಟದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಸಹಪ್ರಾಧ್ಯಾಪಕರಾದ ಡಾ. ಶ್ರೀಧರ ಗೌಡ ಪಿ. ಇವರು ಸ್ವಾಗತಿಸಿದರು , ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಬ್ದುಲ್ ಕುಂಞ ವಂದನಾರ್ಪಣೆ ಸಲ್ಲಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಲಕ್ಷ್ಮಿಕಾಂತ ರೈ ಇವರು ಕಾರ್ಯಕ್ರಮ ನಿರ್ವಹಿಸಿದರು. ಗ್ರಂಥಪಾಲಕರಾದ ಪ್ರವೀಣ್ ಸಹಕರಿಸಿದರು.







