186 ಮೀನುಗಾರರಿಗೆ ಸಾಧ್ಯತಾ ಪತ್ರ ವಿತರಣೆ

ಉಡುಪಿ, ಜ.18: ಹಲವು ವರ್ಷಗಳಿಂದ ಮಾಲಕರ ಮೀನುಗಾರಿಕಾ ಬೋಟುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀನುಗಾರಯುವಕರು ಸಾಧ್ಯತಾ ಪತ್ರದಿಂದ ಮುಂದೆ ಸ್ವಾವಲಂಬಿಗಳಾಗಲಿದ್ದಾರೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯ ಲಯನ್ಸ್ ಭವನದಲ್ಲಿ ಬುಧವಾರ ಉಡುಪಿ ವಿಧಾನಸಭಾ ಕ್ಷೇತ್ರದ ಮೀನುಗಾರರಿಗೆ ಹೊಸ ಯಾಂತ್ರೀಕೃತ ದೋಣಿ ನಿರ್ಮಾಣದ ಸಾಧ್ಯತಾ ಪತ್ರಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.
ಸಾಧ್ಯತಾ ಪತ್ರ ಪಡೆಯುವಲ್ಲಿ ಸುಮಾರು 10 ವರ್ಷಗಳಿಂದ ತೊಂದರೆ ಗಳಿದ್ದು, ಇದರಿಂದ ಬೇರೆಯವರ ಹೆಸರಿನಲ್ಲಿ ಲಕ್ಷಾಂತರ ರೂ. ಬಂಡವಾಳ ಹೂಡಿ, ಮೀನುಗಾರಿಕೆ ನಡೆಸಬೇಕಾಗಿತ್ತು. ಇದೀಗ ಈ ಸಮಸ್ಯೆಗಳನ್ನು ಗಮನಿಸಿ, ಹೊಸ ಸಾಧ್ಯತಾ ಪತ್ರಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಅಕ್ರಮ ಸಕ್ರಮದಲ್ಲಿ 91 ಮಂದಿಗೆ ಸಾಧ್ಯತಾ ಪತ್ರ ವಿತರಿಸಲಾಗಿದೆ ಎಂದರು.
ನವೆಂಬರ್ 2016ರವರೆಗೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಸಾಧ್ಯತಾ ಪತ್ರಗಳನ್ನು ವಿತರಿಸಲಾಗುತ್ತದೆ. ಮೀನುಗಾರಿಕಾ ದೋಣಿಗಳಿಗೆ ಸಂಬಂದಿಸಿ ದಂತೆ ಎಲ್ಲಾ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಮೀನುಗಾರಿಕೆಗೆ ತೆರಳುವಾಗ ಅಗತ್ಯವಿರುವ ದಾಖಲೆ ಪತ್ರಗಳನ್ನು ತೆಗೆದು ಕೊಂಡು ಹೋಗಬೇಕು ಹಾಗೂ ಸಮುದ್ರದಲ್ಲಿ ಕಾನೂನುಗಳನ್ನು ಪಾಲಿಸುವಂತೆ ಮೀನುಗಾರರಿಗೆ ಸಚಿವರು ಮನವಿ ಮಾಡಿದರು.





