ರಮಾನಾಥ ರೈಯವರಿಗೆ ಕುರ್ಚಿ ಆಸೆ: ವಿಜಯಕುಮಾರ್ ಶೆಟ್ಟಿ
ಜ.26: ಎತ್ತಿನಹೊಳೆ ಯೋಜನೆ ವಿರುದ್ಧ ಅಂತಿಮ ನಿರ್ಧಾರ

ಮಂಗಳೂರು, ಜ.18: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಜ.14ಕ್ಕೆ ನ್ಯಾಯಾಲಯದಲ್ಲಿ ಇದರ ವಾದ-ವಿವಾದ ನಡೆಯಬೇಕಾಗಿತ್ತು. ಅದನ್ನೀಗ ಜ.20ಕ್ಕೆ ಮುಂದೂಡಲಾಗಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮನಸ್ಸು ಮಾಡಿದರೆ ಒಂದು ದಿನದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಅವರು ಆ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಅವರಿಗೆ ಕುರ್ಚಿಯ ಆಸೆ ಇದೆ. ಒಬ್ಬ ಕಾಂಗ್ರೆಸಿಗನಾಗಿದ್ದುಕೊಂಡು ಇದನ್ನು ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನೇತ್ರಾವತಿ ನದಿಯ ಸಂರಕ್ಷಣೆಗಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಜಿಲ್ಲೆಯ ಜನರ ಸಹಕಾರ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದ ಸಭೆಯಲ್ಲೂ ನಮ್ಮ ಅಹವಾಲು ಮಂಡಿಸಿದ್ದೇವೆ. ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರೂ ಆ ಬಳಿಕ ಸ್ಪಂದಿಸಿಲ್ಲ. ಹಾಗಾಗಿ ಜ.26ರಂದು ಎತ್ತಿನಹೊಳೆ ಯೋಜನೆ ವಿರುದ್ಧ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಕಳೆದೊಂದು ವರ್ಷದಿಂದ ತಾವು ಸುದ್ದಿಗೋಷ್ಠಿ ಕರೆದು ಮುಖ್ಯಮಂತ್ರಿಗೆ, ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೇಳುತ್ತಾ ಬಂದಿದ್ದೀರಿ. ಆದರೆ, ಯಾವುದನ್ನೂ ಮಾಡುತ್ತಿಲ್ಲ. ಹೋರಾಟ ಸಮಿತಿಯಲ್ಲೇ ಗೊಂದಲವಿದ್ದಂತಿದೆ. ಒಂದೆಡೆ ಜಿಲ್ಲೆಯ ಬಿಜೆಪಿಗರು ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪರವಾಗಿ ಮಾತನಾಡುತ್ತಿದ್ದಾರೆ. ಸಮಿತಿಯ ಪ್ರತೀ ಹೆಜ್ಜೆಯು ಸಮಸ್ಯೆಗೆ ಸ್ಪಂದಿಸುವ ಬದಲು ಓಟ್‌ಬ್ಯಾಂಕ್‌ನತ್ತ ತಿರುಗುತ್ತಿರುವುದು ಸ್ಪಷ್ಟ. ನಿಮಗೆ ಇಚ್ಛಾಶಕ್ತಿಯಿದ್ದಿದ್ದರೆ ಸಾಮೂಹಿಕ ರಾಜೀನಾಮೆಯ ಕೊಡುಗೆಯನ್ನು ಯಾಕೆ ನೀಡುವಂತಹ ವಾತಾವರಣ ಸೃಷ್ಟಿಸಬಾರದು ಎಂದು ಪತ್ರಕರ್ತರು ಪ್ರಶ್ನಿಸಿದರು.
ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ಯಡಿಯೂರಪ್ಪರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಸಾಮೂಹಿಕ ರಾಜೀನಾಮೆ ಕುರಿತು ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ಮಾಡುವೆವು. ಇದು ಸರಕಾರದ ವಿರುದ್ಧ ನಡೆಯುವ ಹೋರಾಟ. ಹೇಳಿದಷ್ಟು ಸುಲಭವಿಲ್ಲ ಎಂದು ಶೆಟ್ಟಿ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಸಮಿತಿಯ ಸಂಚಾಲಕರಾದ ಸತ್ಯಜಿತ್ ಸುರತ್ಕಲ್, ಶಶಿರಾಜ್ ಶೆಟ್ಟಿ ಕೊಳಂಬೆ ಉಪಸ್ಥಿತರಿದ್ದರು.







