ಆರ್‌ಬಿಐಗೆ ಬೀಗ ಜಡಿಯಲು ಯತ್ನ
ಕಾಂಗ್ರೆಸ್ ಮುಖಂಡರ ಬಂಧನ
ಅಹ್ಮದಾಬಾದ್, ಜ.18: ನೋಟು ಅಮಾನ್ಯಗೊಳಿಸಿದ ಕ್ರಮವನ್ನು ವಿರೋಧಿಸಿ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕೇಂದ್ರ ಕಚೇರಿಗೆ ಬೀಗ ಜಡಿಯಲು ಪ್ರಯತ್ನಿಸಿದ ಮಾಜಿ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂಧೆ, ಕಾಂಗ್ರೆಸ್‌ನ ಗುಜರಾತ್ ಘಟಕದ ಅಧ್ಯಕ್ಷ ಭರತ್‌ಸಿನ್ಹ ಸೋಲಂಕಿ ಸೇರಿದಂತೆ ಸುಮಾರು 130 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದ ಬಳಿಕ ಜನಸಾಮಾನ್ಯರ ಬವಣೆಯನ್ನು ನಿವಾರಿಸಲು ಆರ್‌ಬಿಐ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ ಪ್ರತಿಭಟನಾಕಾರರು ರಿಸರ್ವ್ ಬ್ಯಾಂಕ್ ಕಚೇರಿಗೆ ೇರಾವೊ ಹಾಕಿ, ಬೀಗ ಜಡಿಯಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪೊಲೀಸ್ ಉಪಾಯುಕ್ತ ಅರ್ಪಿತಾ ಪಟೇಲ್ ತಿಳಿಸಿದ್ದಾರೆ. ಆರ್‌ಬಿಐ ಕಚೇರಿಯ ಪೂರ್ವ ಭಾಗದಲ್ಲಿ ಶಿಂಧೆ, ಸೋಲಂಕಿ ನೇತೃತ್ವದಲ್ಲಿ ಸುಮಾರು 90 ಮಂದಿ ಮತ್ತು ಪಶ್ಚಿಮ ಭಾಗದಲ್ಲಿ ಸುಮಾರು 40 ಮಂದಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಿ ಬೀಗ ಜಡಿಯಲು ಮುಂದಾಗಿದ್ದರು. ನೋಟು ಅಮಾನ್ಯಗೊಳಿಸಿ ಬಹಳಷ್ಟು ದಿನ ಸಂದರೂ ಜನಸಾಮಾನ್ಯ ಪಡುತ್ತಿರುವ ಬವಣೆಯ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ. ಹಣದ ಮುಗ್ಗಟ್ಟು ತೀವ್ರವಾಗಿ ಜನರನ್ನು ಕಾಡುತ್ತಿದೆ. ದೇಶದ ಆರ್ಥಿಕತೆಯನ್ನು ಹಾಳುಗೆಡವಿದ ಈ ನಿರ್ಧಾರ, ಲಕ್ಷಗಟ್ಟಲೆ ಮಂದಿಯನ್ನು ನಿರುದ್ಯೋಗಿಗಳನ್ನಾಗಿಸಿದೆ. ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಸರಕಾರ ಮತ್ತು ಆರ್‌ಬಿಐಯ ಅಸಮರ್ಥತೆಯನ್ನು ಜಾಹೀರುಗೊಳಿಸುವುದು ಈ ಪ್ರತಿಭಟನೆಯ ಉದ್ದೇಶ ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ ಹೇಳಿದ್ದಾರೆ.





