ಹಿರಿಯ ಕಾಂಗ್ರೆಸ್ ಮುಖಂಡ ಎನ್.ಡಿ.ತಿವಾರಿ ಬಿಜೆಪಿಗೆ ಸೇರ್ಪಡೆ
ಡೆಹ್ರಾಡೂನ್, ಜ.18: ಹಿರಿಯ ಕಾಂಗ್ರೆಸ್ ಮುಖಂಡ ಎನ್‌ಡಿ ತಿವಾರಿ ಅವರು ಪತ್ನಿ ಉಜ್ವಲಾ, ಪುತ್ರ ರೋಹಿತ್ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು. ಉತ್ತರಾಖಂಡದಲ್ಲಿ ಫೆ.15ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಇದು ಕಾಂಗ್ರೆಸ್‌ಗೆ ರಾಜ್ಯದಲ್ಲಿ ಆಗಿರುವ ಹಿನ್ನಡೆ ಎಂದು ಹೇಳಲಾಗಿದೆ.
ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಬಳಿಕ 2002ರಿಂದ 2007ರವರೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ 91ರ ಹರೆಯದ ತಿವಾರಿ, ಕೇಂದ್ರ ಸರಕಾರದಲ್ಲಿ ಹಣಕಾಸು, ವಿದೇಶ ವ್ಯವಹಾರ ಸೇರಿದಂತೆ ಪ್ರಮುಖ ಖಾತೆಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ 2007ರಿಂದ 2009ರವರೆಗೆ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದರು. ಈ ವೇಳೆ ಇವರ ವಿರುದ್ದ ಕೇಳಿ ಬಂದ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಎರಡು ದಿನದ ಹಿಂದೆಯಷ್ಟೇ ಕಾಂಗ್ರೆಸ್‌ನ 11 ಹಾಲಿ ಶಾಸಕರು ಬಿಜೆಪಿ ಸೇರಿದ್ದರು. ಇದೀಗ ಹಿರಿಯ ರಾಜಕಾರಣಿ ತಿವಾರಿಯ ಸೇರ್ಪಡೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಆನೆಬಲ ತಂದಂತಾಗಿದೆ ಎಂದು ಉತ್ತರಾಖಂಡ ಬಿಜೆಪಿ ವಕ್ತಾರ ಮುನ್ನಾಸಿಂಗ್ ಚೌಹಾಣ್ ಹೇಳಿಕೆ ನೀಡಿದ್ದಾರೆ.





