ವಿದ್ಯಾರ್ಹತೆಯ ಮಾಹಿತಿ ಬಹಿರಂಗಗೊಳಿಸದಂತೆ ಸೂಚಿಸಿದ್ದ ಸ್ಮತಿ ಇರಾನಿ
ಹೊಸದಿಲ್ಲಿ, ಜ.18: ತನ್ನ ವಿದ್ಯಾರ್ಹತೆಯ ಕುರಿತ ಮಾಹಿತಿಯನ್ನು ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಒದಗಿಸಕೂಡದು ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ತಿಳಿಸಿದ್ದರು ಎಂದು ಸ್ಕೂಲ್ ಆಫ್ ಓಪನ್ ಲರ್ನಿಂಗ್(ಎಸ್‌ಒಎಲ್) ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಸಚಿವೆಯ ವಿದ್ಯಾರ್ಹತೆ ಕುರಿತ ಎಲ್ಲಾ ದಾಖಲೆಗಳನ್ನು ತನ್ನ ಮುಂದಿಡುವಂತೆ ಕೇಂದ್ರೀಯ ಮಾಹಿತಿ ಆಯೋಗ ಎಸ್‌ಒಎಲ್‌ಗೆ ಸೂಚಿಸಿದೆ. ತಾನು ನಿರ್ದೇಶಿಸಿದ ಪ್ರಕಾರ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿರುವ ದಿಲ್ಲಿ ವಿವಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಹೊಸದಾಗಿ ಶೋಕಾಸ್ ನೊಟೀಸನ್ನೂ ಆಯೋಗ ಜಾರಿಗೊಳಿಸಿದೆ. ಸ್ಮತಿ ಚುನಾವಣಾ ಆಯೋಗಕ್ಕೆ 2004, 2011 ಮತ್ತು 2014ರಲ್ಲಿ ಸಲ್ಲಿ ಸಿದ ವಿದ್ಯಾರ್ಹತೆಯ ವಿವರದಲ್ಲಿ ಅಸಮಂಜತೆ ಇರುವುದಾಗಿ ಓರ್ವ ಅರ್ಜಿದಾರರು ಕೋರ್ಟಿನಲ್ಲಿ ದಾವೆ ಹೂಡಿದ್ದರು. ಆದರೆ ಅರ್ಜಿ ಸಲ್ಲಿಸುವ ವೇಳೆ ಬಹಳಷ್ಟು ವಿಳಂಬವಾಗಿದೆ ಎಂದು ಕಾರಣ ನೀಡಿ ಕೋರ್ಟ್ ಈ ಅರ್ಜಿಯನ್ನು ತಳ್ಳಿ ಹಾಕಿತ್ತು.
ಆದರೆ ಈ ಪ್ರಕರಣದ ಬಗ್ಗೆ ಓರ್ವ ಅರ್ಜಿದಾರರು ಕೇಂದ್ರೀಯ ಮಾಹಿತಿ ಆಯೋಗದೆದುರು ಅರ್ಜಿ ಸಲ್ಲಿಸಿ, ಸಚಿವೆ ಇರಾನಿ ಅವರ ಶೈಕ್ಷಣಿಕ ಅರ್ಹತೆಯ ಕುರಿತಾದ ಮಾಹಿತಿಯನ್ನು ಎಸ್‌ಒಎಲ್ ನೀಡಲು ನಿರಾಕರಿಸಿದೆ ಎಂದು ದೂರು ನೀಡಿದ್ದರು. ಮೂರನೆ ವ್ಯಕ್ತಿಯೋರ್ವರು ಬಯಸಿದ ಕಾರಣ ಮಾಹಿತಿ ಒದಗಿಸುವ ಮೊದಲು ತಾನು ಸ್ಮತಿ ಇರಾನಿ ಅವರ ಗಮನಕ್ಕೆ ತಂದಿರುವುದಾಗಿಯೂ, ಆದರೆ ಮಾಹಿತಿ ಬಹಿರಂಗಗೊಳಿಸದಂತೆ ಸಚಿವೆ ಸೂಚಿಸಿದ್ದರು ಎಂದು ಎಸ್‌ಒಎಲ್‌ನ ಸಾರ್ವಜನಿಕ ಮಾಹಿತಿ ಅಧಿಕಾರಿ ಒ.ಪಿ.ತನ್ವಾರ್ ಹೇಳಿದ್ದಾರೆ.







