ತಮಿಳರಿಗೆ ಅವಹೇಳನ: ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧ ವ್ಯಾಪಕ ಆಕ್ರೋಶ

ಚೆನ್ನೈ, ಜ.19: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬೆಂಬಲಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗಿಯಾದವರನ್ನು ‘ಪೊರುಕ್ಕಿಗಳು’ (ರೌಡಿಗಳು) ಎಂದು ಸಂಬೋಧಿಸಿ ತಮಿಳರನ್ನು ಅವಹೇಳನಗೈದಿದ್ದಕ್ಕಾಗಿ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಎದುರಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಜಲ್ಲಿಕಟ್ಟು ನಡೆದಿದ್ದೇ ಆದಲ್ಲಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಈ ಹಿಂದೆ ಟ್ವೀಟ್ ಮಾಡಿ ಸಾಕಷ್ಟು ಆಕ್ರೋಶಕ್ಕೀಡಾಗಿದ್ದ ಸ್ವಾಮಿ ನಂತರ ‘‘ಸಾಮಾಜಿಕ ಜಾಲತಾಣದಲ್ಲಿ ಧೀಮಂತರಂತೆ ನಡೆದುಕೊಂಡಿದ್ದವರು ಪ್ರತಿಭಟನೆ ನಡೆಯುತ್ತಿರುವಾಗ ಪೊಲೀಸ್ ಬಲದೆದುರು ತಲೆತಗ್ಗಿಸಿದ್ದಾರೆ’’ ಎಂದು ಲೇವಡಿ ಮಾಡಿದ್ದರು. ‘‘ನಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಹೊರತಾಗಿ ಹಿಂಸಾತ್ಮಕವಾಗಿ ಪ್ರತಿಭಟಿಸುವುದಾಗಿ ಹೇಳಿದ್ದ ತಮಿಳಿನಾಡಿನ ಪೊರುಕ್ಕಿಗಳು ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಳುತ್ತಿದ್ದಾರೆ’’ ಎಂದು ಸ್ವಾಮಿ ಅಪಹಾಸ್ಯ ಮಾಡಿದ್ದರು. ‘‘ಟ್ವಿಟ್ಟರಿನಲ್ಲಿ ಹಿಂಸೆ ನಡೆಸುವುದಾಗಿ ಬೆದರಿಸಿದ್ದ ತಮಿಳುನಾಡಿನ ಎಲ್ಲ ಪೊರುಕ್ಕಿಗಳು ತಮ್ಮ ವಿಳಾಸಗಳನ್ನು ಎನ್ ಐಎಗೆ ನೀಡಬೇಕು’’ ಎಂದೂ ಸ್ವಾಮಿ ತಮಿಳರನ್ನು ನಿಂದಿಸಿದ್ದರು ಹಾಗೂ ಇದಕ್ಕಾಗಿ ಕಟು ಟೀಕೆ ಎದುರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ‘‘ಅವರ ವಿಳಾಸಗಳನ್ನು ಕೇಳಿದಾಗ ಪೊರುಕ್ಕಿಗಳೇಕೆ ನರ್ವಸ್ ಅಗುತ್ತಿದ್ದಾರೆ ?’’ ಎಂದು ಪ್ರಶ್ನಿಸಿದ್ದರು.
ಸ್ವಾಮಿಯ ಟ್ವೀಟುಗಳನ್ನು ಓದಿದವರು ಅವರು ಜಲ್ಲಿಕಟ್ಟು ಕ್ರೀಡೆಯ ಬದ್ಧ ವಿರೋಧಿ ಎಂದು ತಿಳಿಯಬಹುದು. ಆದರೆ ನಿಜ ಹೇಳಬೇಕೆಂದರೆ ಜಲ್ಲಿಕಟ್ಟು ಮೇಲಿನ ನಿಷೇಧ ತೆರವುಗೊಳಿಸಬೇಕೆಂದು ಅವರು ಸುಪ್ರೀಂ ಕೋರ್ಟಿನಲ್ಲಿ ವಾದಿಸುತ್ತಿದ್ದಾರೆ.
ಅವರದೇ ಮಾತುಗಳಲ್ಲಿ ಹೇಳುವುದಾದರೆ, ‘‘ಹಲವು ತಮಿಳರ ಮನವಿಯಂತೆ ನಾನು ಜಲ್ಲಿಕಟ್ಟು ಪರವಾಗಿ ವಾದಿಸುತ್ತಿದ್ದೇನೆ. ಆದರೆ ನಾನು ಅದಕ್ಕೆ ವಿರುದ್ಧವಾಗಿದ್ದೇನೆಂದು ಪೊರುಕ್ಕಿಗಳು ಸುಳ್ಳು ಹೇಳುತ್ತಿದ್ದಾರೆ’’
ಈಗಾಗಲೇ ಸ್ವಾಮಿಯನ್ನು ಅಣಕಿಸುವ ಹಲವು ಮೆಮೆಗಳು ಹಲವಾರು ಫೇಸ್ ಬುಕ್ ಗ್ರೂಪ್ ಗಳಲ್ಲಿ ಕಾಣಿಸಲಾರಂಭಿಸಿವೆ.
ಜಲ್ಲಿಕಟ್ಟು ಪರವಾಗಿ ಪ್ರತಿಭಟಿಸುತ್ತಿರುವವರು ತಮ್ಮ ಶಾಂತಿಯುತ ಪ್ರತಿಭಟನೆಯ ಹೊರತಾಗಿಯೂ ಸ್ವಾಮಿ ತಮ್ಮನ್ನು ಅವಹೇಳನ ಮಾಡುವುದು ಸಹಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ತಮಿಳು ಸೆಲೆಬ್ರಿಟಗಳಾದ ಆರ್.ಜೆ.ಬಾಲಾಜಿ, ಖುಷ್ಬೂ ಕೂಡ ಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.
ಸ್ವಾಮಿ ತಮ್ಮ ಹೇಳಿಕೆಗಳಿಗೆ ಕ್ಷಮೆ ಯಾಚಿಸಬೇಕೆಂದು ಹೇಳುವ ಆನ್ ಲೈನ್ ಪಿಟಿಶನ್ ಒಂದೂ ಚೇಂಜ್. ಆರ್ಗ್ ನಲ್ಲಿದೆ.







