ಚಪ್ಪಲಿಯಲ್ಲಿ 26 ಲಕ್ಷ ರೂಪಾಯಿಯ ಚಿನ್ನ ಪತ್ತೆ

ಹೊಸದಿಲ್ಲಿ,ಜ.19: ವಿದೇಶಗಳಿಗೆ ಪ್ರಯಾಣಿಸಲು ಚಪ್ಪಲಿ ಧರಿಸಿ ವಿಮಾನ ನಿಲ್ದಾಣ ಪ್ರವೇಶಿಸುವವರು ಕೊಂಚ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಹೆಚ್ಚುವರಿ ತಪಾಸಣೆಗೊಳಪಡಿಸಬಹುದು.
ಬುಧವಾರ ದಿಲ್ಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಚಪ್ಪಲಿಗಳಲ್ಲಿ 26 ಲಕ್ಷ ರೂ.ಮೌಲ್ಯದ ಚಿನ್ನದ ಬಿಸ್ಕಿಟ್‌ಗಳನ್ನು ಬಚ್ಚಿಟ್ಟುಕೊಂಡಿದ್ದ ಇಬ್ಬರು ಪ್ರಯಾಣಿಕರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇದು ಈ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿರುವ ಇಂತಹ ಮೂರನೇ ಪ್ರಕರಣವಾಗಿದೆ. ಕಳೆದ ವರ್ಷ ಇಂತಹ ಮೂರು ಪ್ರಕರಣಗಳನ್ನು ಅಧಿಕಾರಿಗಳು ವಿಫಲಗೊಳಿಸಿದ್ದರು. ಚಪ್ಪಲಿಗಳ ಸ್ಕಾನಿಂಗ್ ವೇಳೆ ಅಧಿಕಾರಿಗಳು ಈಗ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ.
ಈ ಪ್ರಯಾಣಿಕರು ಥಾಯ್ಲಂಡ್‌ನಿಂದ ಥಾಯ್ ಏರ್‌ವೇಸ್ ವಿಮಾನದ ಮೂಲಕ ದಿಲ್ಲಿಗೆ ಬಂದಿಳಿದಿದ್ದರು. ಅವರನ್ನು ತಪಾಸಣೆಗೊಳಪಡಿಸಿದಾಗ ಚಪ್ಪಲಿಗಳಲ್ಲಿ ಪೊಳ್ಳುಜಾಗವನ್ನು ನಿರ್ಮಿಸಿ ಅದರಲ್ಲಿ ಒಟ್ಟು 118 ಚಿನ್ನದ ಬಿಸ್ಕಿಟ್‌ಗಳನ್ನು ಬಚ್ಚಿಟ್ಟಿದ್ದು ಪತ್ತೆಯಾಗಿದೆ. ಇವುಗಳ ತೂಕ 938 ಗ್ರಾಂ ಆಗಿದೆ.
ಕಳೆದ ವರ್ಷ ಚಿನ್ನದ ಅಕ್ರಮ ಸಾಗಾಣಿಕೆಗಾಗಿ ಡಯಾಪರ್‌ನಿಂದ ಪಪಾಯದವರೆಗೆ ಎಲ್ಲವನ್ನೂ ಬಳಸಿಕೊಳ್ಳಲಾಗಿತ್ತು. ತಾವು ಹೆಚ್ಚಿನ ಎಚ್ಚರಿಕೆ ವಹಿಸಿದಷ್ಟೂ ಕಳ್ಳ ಸಾಗಣೆ ದಾರರು ಹೊಸ ಹೊಸ ಉಪಾಯಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ ಎನ್ನುತ್ತಾರೆ ಕಸ್ಟಮ್ಸ್ ಅಧಿಕಾರಿಗಳು.
ದಿಲ್ಲಿ ವಿಮಾನ ನಿಲ್ದಾಣದಲ್ಲಿ 2012-13ನೇ ಸಾಲಿನಲ್ಲಿ 6.6 ಕೆ.ಜಿ ಮತ್ತು 2023-14ನೇ ಸಾಲಿನಲ್ಲಿ 384 ಕೆ.ಜಿ.ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದರೆ, 2014-15ರಲ್ಲಿ ಈ ಪ್ರಮಾಣ 574 ಕೆ.ಜಿ.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿತ್ತು. ಮುಂದಿನ ವರ್ಷ ಅಕ್ರಮ ಚಿನ್ನಸಾಗಣೆಯ ಪ್ರಮಾಣ ತಗ್ಗಿತ್ತಾದರೂ 2016ರಲ್ಲಿ ಸುಮಾರು 60 ಕೋ.ರೂ.ವೌಲ್ಯದ 220 ಕೆ.ಜಿ.ಗೂ ಅಧಿಕ ಚಿನ್ನ ವಶವಾಗಿತ್ತು.







