23 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಂಡ ತಂದೆಯನ್ನು ನೋಡಿದ ಖುಷಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಗ

ಕೊಲ್ಲಾಪುರ,ಜ.19: 1996ರಲ್ಲಿ ಮುಂಬೈ ಉಚ್ಚ ನ್ಯಾಯಾಲಯವು ತನ್ನ ತಂದೆ ಹಸನ್‌ಗೆ ಜೀವಾವಧಿ ಶಿಕ್ಷೆಯನ್ನು ದೃಢಪಡಿಸಿದಾಗ ಸಾಜಿದ್ ಮಕ್ವಾನಾಗೆ ಇನ್ನೂ ನಾಲ್ಕು ವರ್ಷಗಳೂ ತುಂಬಿರಲಿಲ್ಲ. ಜೈಲು ಸೇರಿದ ಬಳಿಕ ಹಸನ್ ಎಂದೂ ಪೆರೋಲ್ ಕೋರಿ ಅರ್ಜಿಯನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಹಸನ್ 23 ವರ್ಷಗಳ ಬಂಧನದ ಬಳಿಕ ಮಂಗಳವಾರ, ಜ.17ರಂದು ಇಲ್ಲಿಯ ಕಲಾಂಬಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾನೆ ಎಂಬ ಸುದ್ದಿ ತಿಳಿದಾಗಿನಿಂದ ಸಾಜಿದ್(24)ನ ಕಾಲುಗಳು ನೆಲದ ಮೇಲೆಯೇ ಇರಲಿಲ್ಲ. ಅಷ್ಟೊಂದು ವರ್ಷಗಳ ಬಳಿಕ ಜನ್ಮ ನೀಡಿದ ತಂದೆಯನ್ನು ಭೇಟಿಯಾಗುತ್ತಿದ್ದೇನೆ ಎಂಬ ಸಂಭ್ರಮ ಅತನಲ್ಲಿ ಮನೆ ಮಾಡಿತ್ತು.
ಆದರೆ ಈ ಸಂಭ್ರಮ ಸಾಜಿದ್ ಪಾಲಿಗೆ ತುಂಬ ದುಬಾರಿಯಾಗಿ ಪರಿಣಮಿಸಿತು. ಜೈಲಿನ ಹೊರಗೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಮಂಗಳವಾರ ಮಧ್ಯಾಹ್ನ ಬಂಧಮುಕ್ತನಾಗಿ ಜೈಲಿನಿಂದ ಹೊರ ಬಂದಿದ್ದ ಹಸನ್(65) ಜೈಲಿನ ಎದುರು ನಿಂತು ಅದಕ್ಕೊಂದು ಸೆಲ್ಯೂಟ್ ಹೊಡೆದಿದ್ದ. ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲೆಂದು ಹೆಜ್ಜೆಗಳನ್ನು ಹಾಕಿದ್ದ. ತಂದೆಯನ್ನು ಭೇಟಿಯಾದ ಸಂಭ್ರಮದಲ್ಲಿದ್ದ ಸಾಜಿದ್‌ಗೆ ತನ್ನ ಭಾವೋದ್ವೇಗವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತಂದೆಯೊಂದಿಗೆ ಮಾತನಾಡುತ್ತಿದ್ದಾಗಲೇ ಎದೆನೋವೆಂದು ದೂರಿಕೊಂಡ ಆತ ಅಲ್ಲಿಯೇ ಕುಸಿದುಬಿದ್ದಿದ್ದ. ಕುಟುಂಬದ ಸದಸ್ಯರು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿದರಾದರೂ ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಅಸು ನೀಗಿದ್ದಾನೆ ಎಂದು ಘೋಷಿಸಿದರು ಎಂದು ಜೈಲಿನ ಅಧೀಕ್ಷಕ ಶರದ್ ಶೆಳ್ಕೆ ತಿಳಿಸಿದರು.
ಮುಂಬೈನ ಅಂಧೇರಿಯಲ್ಲಿ ಮೋಟರ್ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ ಸಾಜಿದ್ ಜೈಲಿನಿಂದ ತಂದೆಯ ಬಿಡುಗಡೆಯ ಬಳಿಕ ಮದುವೆಯಾಗಲು ನಿರ್ಧರಿಸಿದ್ದ.
1977 ರಲ್ಲಿ ಹಸನ್ ಇನ್ನೊಬ್ಬ ವ್ಯಕ್ತಿಯೊಂದಿಗೆ ಹೊಡೆದಾಡಿದ್ದ. ಗಾಯಗಳಿಂದ ಆ ವ್ಯಕ್ತಿ ಸತ್ತು ಹೋಗಿದ್ದ. ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. 1981ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ ಹಸನ್ ಜಾಮೀನಿನಲ್ಲಿ ಹೊರಗೆ ಬಂದಿದ್ದ. ಆದರೆ 1996ರಲ್ಲಿ ಆತನ ಜೀವಾವಧಿ ಶಿಕ್ಷೆಯನ್ನು ದೃಢಪಡಿಸಿದ್ದ ಉಚ್ಚ ನ್ಯಾಯಾಲಯವು ಪುಣೆಯ ಯರವಾಡಾ ಜೈಲಿಗೆ ರವಾನಿಸಿತ್ತು. 2015, ನವಂಬರ್‌ನಲ್ಲಿ ಆತನನ್ನು ಕಲಾಂಬಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.







