ಕಳಪೆ ನಿರ್ವಹಣೆ ತೋರುವ ಅಧಿಕಾರಿಗಳಿಗಿಲ್ಲ ಮೋದಿ ಆಡಳಿತದಲ್ಲಿ ಕ್ಷಮೆ
ಎರಡು ಐಪಿಎಸ್ ಗಳ ಬಳಿಕ ಈಗ ಐಎಎಸ್ ಸರದಿ !

ಹೊಸದಿಲ್ಲಿ, ಜ.19: ಅಸಮರ್ಪಕ ಕಾರ್ಯಶೈಲಿಯ ನೆಪವೊಡ್ಡಿ ಹಿರಿಯ ಐಎಎಸ್ ಅಧಿಕಾರಿ ಕೆ.ನರಸಿಂಹ ಅವರನ್ನು ‘ಸಾರ್ವಜನಿಕ ಹಿತಾಸಕ್ತಿ’ ದೃಷ್ಟಿಯಿಂದ ಸೇವೆಯಿಂದ ವಜಾಗೊಳಿಸಲಾಗಿದೆ. ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಇಂತಹ ಕ್ರಮ ಬಹಳ ಅಪರೂಪವಾಗಿದೆ.
1991ನೆ ಬ್ಯಾಚಿನ ಅಧಿಕಾರಿಯಾಗಿರುವ ನರಸಿಂಹ ಅವರು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ಯಾಡರ್ ಗೆ ಸೇರಿದವರಾಗಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳೂ ಇವೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಯ ಸೇವೆಯನ್ನು ಇಲಾಖಾ ಮಟ್ಟದಲ್ಲಿ ಪರಿಶೀಲಿಸಿದಾಗ ಅವರು ತಮ್ಮ ಹುದ್ದೆಗೆ ತಕ್ಕವರಲ್ಲವೆಂಬ ಕಾರಣಕ್ಕೆ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಇಂತಹುದೇ ಒಂದು ಕ್ರಮದಲ್ಲಿ ಗೃಹ ಸಚಿವಾಲಯವು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಇದೇ ಕಾರಣಕ್ಕಾಗಿ ಸೇವೆಯಿಂದ ವಜಾಗೊಳಿಸಿತ್ತು.
1998 ಬ್ಯಾಚಿನ ಐಪಿಎಸ್ ಅಧಿಕಾರಿ ಮಾಯಾಂಕ್ ಶೀಲ್ ಚೊವಾನ್ ಹಾಗೂ 1992ನೆ ಬ್ಯಾಚಿನ ಅಧಿಕಾರಿ ರಾಜ್ ಕುಮಾರ್ ದೇವಾಂಗನ್ ಅವರೇಸೇವೆಯಿಂದ ವಜಾಗೊಂಡವರು. ಅವರಿಗೆ ಅವಧಿಪೂರ್ವ ನಿವೃತ್ತಿ ನೀಡಲಾಗಿದೆ.
ಚೊವಾನ್ ವಿರುದ್ಧ ಅಕ್ರಮ ಆಸ್ತಿ ಹೊಂದಿದ ದೂರು ಇತ್ತು. ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕಾರಣವಿಲ್ಲದೆ ಕೆಲಸಕ್ಕೆ ಹಾಜರಾಗದ ಆರೋಪವೂ ಅವರ ಮೇಲಿತ್ತು.
ದೇವಾಂಗನ್ ಅವರು 1998ರಲ್ಲಿ ಛತ್ತೀಸಗಢದ ಜನಜ್ಗಿರ್ ಚಂಪಾ ಜಿಲ್ಲೆಯ ಎಸ್ಪಿಯಾಗಿದ್ದಾಗ ನಡೆದ ಲೂಟಿ ಪ್ರಕರಣವೊಂದರ ಸಂಬಂಧ ಇಲಾಖಾ ತನಿಖೆ ಎದುರಿಸುತ್ತಿದ್ದರು.







