ಅಸ್ಪ್ರಶ್ಯತೆ ಎಂಬುದು ಮನೋರೋಗ: ಸಿದ್ದರಾಮಯ್ಯ
ಮಂಗಳೂರು ವಿವಿಯಲ್ಲಿ ನಾರಾಯಣಗುರು ಅಧ್ಯಯನ ಪೀಠ ಉದ್ಘಾಟನೆ

ಕೊಣಾಜೆ, ಜ.19: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗುವ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವು ಸಾಮಾಜಿಕ ಚಿಂತನೆಗಳನ್ನು ಒಳಗೊಂಡಿವೆ. ಅವುಗಳನ್ನು ಯುವ ವಿದ್ಯಾರ್ಥಿ ಸಮೂಹಕ್ಕೆ ತಿಳಿಸುವ ಕೆಲಸವನ್ನು ಅಧ್ಯಯನ ಪೀಠಗಳು ಮಾಡಬೇಕಿದೆ ಎಂದರು.
ಅಸ್ಪ್ರಶ್ಯತೆ ಎಂಬುದು ಮನೋರೋಗವಿದ್ದಂತೆ. ಮನುಷ್ಯರೇ ಸೃಷ್ಟಿಸಿದ ಈ ಮನೋರೋಗವನ್ನು ಹೋಗಲಾಡಿಸಲು ಮನ ಪರಿವರ್ತನೆಯೊಂದೇ ಚಿಕಿತ್ಸೆಯಾಗಿದೆ. ಈ ರೋಗವನ್ನು ಹೋಗಲಾಡಿಸದಿದ್ದರೆ ಸಮಾಜದಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೇರಳದಲ್ಲಿ ದಲಿತರು, ಶೂದ್ರರನ್ನು ಸವರ್ಣೀಯರು ತಾರತಮ್ಯದಿಂದ ಕಾಣುತ್ತಿದ್ದುದನ್ನು ಸಹಿಸದ ನಾರಾಯಣಗುರು ಅದರ ವಿರುದ್ಧ ಸೌಮ್ಯವಾಗಿ ಹೋರಾಟ ಆರಂಭಿಸಿದರು. ದಲಿತರಿಗೆ, ಹಿಂದುಳಿದ ವರ್ಗಕ್ಕೆ ಪ್ರವೇಶವಿಲ್ಲದ ದೇವಸ್ಥಾನವನ್ನೇ ಬಹಿಷ್ಕರಿಸಿದ್ದ ನಾರಾಯಣ ಗುರು ಕೇರಳದಲ್ಲಿ 60 ದೇವಸ್ಥಾನಗಳನ್ನು ಸ್ಥಾಪಿಸಿ ಕ್ರಾಂತಿ ನಡೆಸಿದ್ದರು. ಅಂತಹ ಸಮಾಜ ಸುಧಾರಕರ ಹೆಸರಿನಲ್ಲಿ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಿದ್ದರಾಮಯ್ಯ ನುಡಿದರು.
ನಾರಾಯಣ ಗುರುಗಳ ವಿಚಾರಧಾರೆ, ಚಿಂತನೆಗಳು ಸಾರ್ವಕಾಲಿಕವಾದುದು. ಅದನ್ನು ಯುವಜನಾಂಗಕ್ಕೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಅಲ್ಲದೆ ವಿಶ್ವವಿದ್ಯಾನಿಲಯಗಳು ವೈಚಾರಿಕ ಮತ್ತು ವೈಜ್ಞಾಣಿಕ ಶಿಕ್ಷಣ ನೀಡಲು ಮುಂದಾಗಬೇಕು. ಜಾತ್ಯತೀತ ಮನೋಭಾವ ಬೆಳೆಸುವ ವಾತಾವರಣವನ್ನು ರೂಪಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. ಮೋಡ್ಯುಲರ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ ಮಂಗಳೂರು ವಿವಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮೊದಲ ಸ್ಥಾನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಬೆಳೆಯಲು ಉನ್ನತ ಶಿಕ್ಷಣ ಪಡೆಯುವ ಅಗತ್ಯವಿದೆ. ರಾಜ್ಯ ಸರಕಾರ ಶಿಕ್ಷಣಕ್ಕಾಗಿ ಕಳೆದ 2016-17ನೆ ಸಾಲಿನಲ್ಲಿ 25 ಸಾವಿರ ಕೋ.ರೂ. ನೀಡಿದೆ. ಬೆಂಗಳೂರಿನಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ಸ್ಕೂಲ್ ಆಫ್ ಇಕನಾಮಿಕ್’ ತೆರೆಯಲು ಸಿದ್ಧತೆ ನಡೆಸಲಾಗಿದೆ. ಕೌಶಲ ಅಭಿವೃದ್ಧಿ ವಿವಿ ಅಭಿವೃದ್ಧಿ ಸ್ಥಾಪನೆಗೂ ಚಿಂತನೆ ನಡೆಸಲಾಗಿದೆ ಎಂದರು.
ಶೈಕ್ಷಣಿಕ ಸಂಸ್ಥೆಗಳು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಶಿಕ್ಷಣ ನೀಡಲು ಮುಂದೆ ಬರಬೇಕು ಎಂದವರು ಕರೆ ನೀಡಿದರು. ಇದೇ ಸಂಧರ್ಭ ವಿವಿಯ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು.
ಶಿಷ್ಯವೇತನರಹಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ಶಿಷ್ಯವೇತನ ನೀಡಿಕೆ ಯೋಜನೆ ಇದೇ ವೇಳೆ ಉದ್ಘಾಟನೆಗೊಂಡಿತು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಮಾಡ್ಯುಲರ್ ಪ್ರಯೋಗಾಲಯಗಳನ್ನು ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು 2016-17ನೆ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಿದರು.
ಮಾಜಿ ಸಚಿವ, ಶಾಸಕ ವಿನಯಕುಮಾರ್ ಸೊರಕೆ ಅಧ್ಯಯನ ಪೀಠದ ಬ್ರಹ್ಮಶ್ರೀ ನಾರಾಯಣಗುರು ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದರು.
ವಿಶ್ವವಿದ್ಯಾನಿಲಯದ ಪ್ರಸಾರಾಂಗದ ರಜತ ಮಹೋತ್ಸವದ ಅಂಗವಾಗಿ ಪ್ರಸಾರಾಂಗದ ಗ್ರಂಥ ಸರಣಿಯ 19 ವಿಭಿನ್ನ ಪುಸ್ತಕಗಳನ್ನು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಲೋಕಾರ್ಪಣೆಗೊಳಿಸಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪಕಾಯರ್ಕ್ರಮದ ಅಧ್ಯಕ್ಷತೆ ವಹಿಸಿದ್ದರು.







