ಸಚಿನ್ ತೆಂಡುಲ್ಕರ್ ಎಲೈಟ್ ಕ್ಲಬ್‌ಗೆ ಧೋನಿ ಸೇರ್ಪಡೆ

ಕಟಕ್, ಜ.19: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಬಳಿಕ ಸ್ವದೇಶದಲ್ಲಿ 4,000ಕ್ಕೂ ಅಧಿಕ ರನ್ ಗಳಿಸಿದ ಎರಡನೆ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಧೋನಿ ಇಂಗ್ಲೆಂಡ್ ವಿರುದ್ಧದ ಎರಡನೆ ಏಕದಿನದ 14ನೆ ಓವರ್‌ನಲ್ಲಿ 10 ರನ್ ಗಳಿಸಿದ ತಕ್ಷಣ ಈ ಮೈಲುಗಲ್ಲು ತಲುಪಿದ್ದರು. ಇತ್ತೀಚೆಗಷ್ಟೇ ನಾಯಕತ್ವವನ್ನು ತ್ಯಜಿಸಿದ್ದ ಧೋನಿ 110ನೆ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
ಸಚಿನ್ ತೆಂಡುಲ್ಕರ್ ಸ್ವದೇಶದಲ್ಲಿ 6,976 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 3,406 ರನ್ ಗಳಿಸಿದ್ದ ರಾಹುಲ್ ದ್ರಾವಿಡ್ ಮೂರನೆ ಸ್ಥಾನದಲ್ಲಿದ್ದಾರೆ.
ಇದೇ ವೇಳೆ, ಧೋನಿ ವಿದೇಶಿ ಸರಣಿಗಿಂತ ಸ್ವದೇಶದಲ್ಲಿ ನಡೆದ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ರಾಂಚಿಯಲ್ಲಿ ಜನಿಸಿರುವ ಧೋನಿ ವಿದೇಶ ನೆಲದಲ್ಲಿ 175 ಏಕದಿನ ಪಂದ್ಯಗಳನ್ನು ಆಡಿದ್ದು 46.17ರ ಸರಾಸರಿಯಲ್ಲಿ 5,125 ರನ್ ಗಳಿಸಿದ್ದು ಅಜೇಯ 109 ರನ್ ಗರಿಷ್ಠ ಸ್ಕೋರಾಗಿದೆ.
ಧೋನಿ ಸ್ವದೇಶದಲ್ಲಿ 58ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು, ತನ್ನ ವೃತ್ತಿಜೀವನದ ಆರಂಭದ ದಿನದಲ್ಲಿ ಶ್ರೀಲಂಕಾದ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್(ಅಜೇಯ 183) ಗಳಿಸಿದ್ದರು.





