ಅಮೆರಿಕಕ್ಕೆ ಹಿಂದೂ ಅಧ್ಯಕ್ಷ ಸಹ ಆಯ್ಕೆಯಾಗಬಹುದು : ಒಬಾಮ ಭರವಸೆ

ವಾಶಿಂಗ್ಟನ್, ಜ. 19: ಅಮೆರಿಕವು ಪ್ರತಿಭೆಯನ್ನು ಗುರುತಿಸುವವರೆಗೆ ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ನೀಡುವವರೆಗೆ, ಅದು ಮಹಿಳಾ ಅಧ್ಯಕ್ಷೆಯನ್ನು ಮಾತ್ರವಲ್ಲ, ಭವಿಷ್ಯದಲ್ಲಿ ಲ್ಯಾಟಿನೊ, ಯಹೂದಿ ಮತ್ತು ಹಿಂದೂ ಅಧ್ಯಕ್ಷರನ್ನೂ ಹೊಂದಬಹುದಾಗಿದೆ ಎಂದು ದೇಶದ ಮೊದಲ ಮಿಶ್ರ ಜನಾಂಗೀಯ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಬುಧವಾರ ಇಲ್ಲಿನ ಶ್ವೇತಭವನದಲ್ಲಿ ಅಧ್ಯಕ್ಷರಾಗಿ ತನ್ನ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
‘‘ಪ್ರತಿಯೊಂದು ಜನಾಂಗ ಮತ್ತು ಧರ್ಮ ಹಾಗೂ ದೇಶದ ಪ್ರತಿ ಮೂಲೆಗಳಿಂದ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುವುದನ್ನು ನಾವು ನೋಡಲಿದ್ದೇವೆ. ಯಾಕೆಂದರೆ ಇದು ಅಮೆರಿಕದ ಶಕ್ತಿಯಾಗಿದೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವುದನ್ನು ನಾವು ಮುಂದುವರಿಸಿದರೆ, ಖಂಡಿತವಾಗಿಯೂ ನಾವು ಮಹಿಳಾ ಅಧ್ಯಕ್ಷರೊಬ್ಬರನ್ನು ಹೊಂದಲಿದ್ದೇವೆ. ಅದೇ ರೀತಿ, ಲ್ಯಾಟಿನೊ ಅಧ್ಯಕ್ಷ, ಯಹೂದಿ ಅಧ್ಯಕ್ಷ ಮತ್ತು ಹಿಂದೂ ಅಧ್ಯಕ್ಷರನ್ನೂ ಹೊಂದಲಿದ್ದೇವೆ’’ ಎಂದು ಪತ್ರಕರ್ತರೊಂದಿಗಿನ ವಿದಾಯ ಕೂಟದಲ್ಲಿ ಹೇಳಿದರು.
‘‘ಒಂದು ಹಂತದಲ್ಲಿ ನಾವು ಸಂಪೂರ್ಣ ಮಿಶ್ರ ಜನಾಂಗದ ಅಧ್ಯಕ್ಷರ ಬಳಗವನ್ನೇ ಹೊಂದಲಿದ್ದೇವೆ ಹಾಗೂ ಅವರನ್ನು ಏನೆಂದು (ಯಾವ ಜನಾಂಗದವರು) ಕರೆಯುವುದು ಎಂದು ಯಾರಿಗೂ ಗೊತ್ತಾಗಲಾರದು’’ ಎಂದು ಹೇಳಿದ ಅವರು, ‘‘ಅದು ಸರಿಯಾದ ಬೆಳವಣಿಗೆಯೇ ಆಗಿದೆ’’ ಎಂದು ನಗುತ್ತಾ ಹೇಳಿದರು.
ನೀವು ದೇಶದ ಮೊದಲ ಕರಿಯ ಅಧ್ಯಕ್ಷರಾಗಿದ್ದೀರಿ. ಇದು ಮತ್ತೊಮ್ಮೆ ಪುನರಾವರ್ತನೆಯಾಗುವುದೆಂದು ನೀವು ನಿರೀಕ್ಷಿಸಿದ್ದೀರಾ? ಯಾಕೆಂದರೆ, ಟ್ರಂಪ್ ವಿಜಯವು ಅಲ್ಪಸಂಖ್ಯಾತರ ವಿರುದ್ಧ ಬಿಳಿಯರು ನೀಡಿದ ಪ್ರಹಾರ ಎಂಬ ರಾಜಕೀಯ ಮಾತುಗಳು ಕೇಳಿಬರುತ್ತಿವೆ- ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಇದಕ್ಕೆ ವಿವರವಾದ ಪ್ರತಿಕ್ರಿಯೆ ನೀಡಿದ ಒಬಾಮ, ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಅಸಮಾನತೆಯನ್ನು ಅಮೆರಿಕ ಗುರುತಿಸಬೇಕಾಗಿದೆ ಹಾಗೂ ಅದು ಸರ್ವರನ್ನೊಳಗೊಂಡ ದೇಶವಾಗಬೇಕಾಗಿದೆ ಎಂದರು.
‘‘ನಿಯೋಜಿತ ಅಧ್ಯಕ್ಷ ದೊನಾಲ್ಡ್ ಟ್ರಂಪ್‌ರಿಗೆ ಮತ ಹಾಕಿದ ಭಾರೀ ಸಂಖ್ಯೆಯ ಜನರು ನಮ್ಮಲಿದ್ದಾರೆ. ತಮ್ಮನ್ನು ಕಡೆಗಣಿಸಲಾಗುತ್ತಿದೆ ಹಾಗೂ ತಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬುದಾಗಿ ಅವರು ಭಾವಿಸಿದ್ದಾರೆ. ತಮಗೆ ಸಿಕ್ಕಿದಂಥ ಸಮಾನ ಅವಕಾಶಗಳು ತಮ್ಮ ಮಕ್ಕಳಿಗೆ ಸಿಗಲಾರದು ಎಂಬ ನಿರಾಶೆಗೆ ಅವರು ಒಳಗಾಗಿದ್ದಾರೆ. ಅಗಾಧ ಶ್ರೀಮಂತರ ಒಂದು ಸಣ್ಣ ಗುಂಪು ಮತ್ತು ತುತ್ತು ಕೂಳಿಗಾಗಿ ಹೋರಾಡುತ್ತಿರುವ ಇತರರ ಬೃಹತ್ ಗುಂಪನ್ನು ಹೊಂದಿರುವ ಅಮೆರಿಕವನ್ನು ನಾವು ಹೊಂದಲು ಸಾಧ್ಯವಿಲ್ಲ’’ ಎಂದು ಒಬಾಮ ನುಡಿದರು.







