ಮೋದಿಯನ್ನು ಅಸಮರ್ಥರೆಂದು ಒಪ್ಪಿಕೊಂಡ ಬಿಎಂಎಸ್ ಗೌರವ ಅಧ್ಯಕ್ಷರು
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಟೀಕೆ

ಪುತ್ತೂರು , ಜ.19 : ಇತ್ತೀಚೆಗೆ ಪುತ್ತೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಭಾರತೀಯ ಮಜ್ದೂರ್ ಸಂಘದ ನೇತೃತ್ವದ ರಿಕ್ಷಾ ಚಾಲಕ ಮಾಲಕರ ಸಂಘದ ಪ್ರತಿಭಟನೆಯಲ್ಲಿ ಈ ಸಂಘಟನೆಯ ಗೌರವ ಅಧ್ಯಕ್ಷ ಡಾ. ಪ್ರಸಾದ್ ಭಂಡಾರಿ ಅವರು ಐಎಎಸ್ ಅಧಿಕಾರಿಗಳು ತಂದಿಟ್ಟ ಮಸೂದೆ ಕಾಗದ ಪತ್ರಕ್ಕೆ ಪ್ರಧಾನಿ ಗೊತ್ತಿಲ್ಲದೆ ಸಹಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದು, ಇದರಿಂದ ಪ್ರಧಾನಿ ಮೋದಿ ಅಸಮರ್ಥರೆದು ಸ್ವತಃ ಸಂಘ ಪರಿವಾರದ ಮುಖಂಡರೇ ಒಪ್ಪಿಕೊಂಡಂತಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಅವರು ಟೀಕಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರ ಗಳಿಕೆಯನ್ನು ಕಸಿದುಕೊಳ್ಳುವ ಈ ಸಾರಿಗೆ ನೀತಿಯನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಪುತ್ತೂರಿನ ಬಿ.ಎಂ.ಎಸ್.ನ ಗೌರವಾಧ್ಯಕ್ಷ ಡಾ. ಪ್ರಸಾದ್ ಭಂಡಾರಿ ಅವರು ಪ್ರಧಾನಮಂತ್ರಿ ಮೋದಿಯವರಿಗೆ ಈ ದೇಶವನ್ನು ಆಳುವ ಯೋಗ್ಯತೆಯಿಲ್ಲವೆಂಬ ಅರ್ಥದ ಮಾತುಗಳನ್ನು ಹೇಳುವ ಮೂಲಕ ತಮಗಾದ ಹತಾಶೆಯನ್ನು ಹೊರಗೆಡಹಿದ್ದಾರೆ .
"ಐ.ಎ.ಎಸ್ ಅಧಿಕಾರಿಗಳು ಈ ಹೇರಿಕೆಯನ್ನು ಮಾಡಿ ಪ್ರಧಾನಿ ಮೋದಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಮುಂದಿರಿಸಿದ್ದಾರೆ, ಗೊತ್ತಿಲ್ಲದೆ ಪ್ರಧಾನಿ ಮತ್ತು ಸಚಿವರು ಇದನ್ನು ಪಾಸ್ ಮಾಡಿದ್ದಾರೆ" ಎಂದು ಹೇಳಿದ ಬಿ.ಎಂ.ಎಸ್.ನ ಗೌರವಾಧ್ಯಕ್ಷರ ಮಾತಿನ ಅರ್ಥವಾದರೂ ಏನು? ಐ.ಎ.ಎಸ್. ಅಧಿಕಾರಿಗಳು ತಂದಿಟ್ಟ ಕಾಗದ ಪತ್ರಗಳಿಗೆ ಪ್ರಧಾನಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕುತ್ತಿದ್ದಾರೆಯೇ? ಅಥವಾ ಐ.ಎ.ಎಸ್. ಅಧಿಕಾರಿಗಳು ತಂದಿಟ್ಟ ಕಾಗದ ಪತ್ರಗಳಲ್ಲಿ ಬರೆದಿರುವುದನ್ನು ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಪ್ರಧಾನಮಂತ್ರಿಗಳಿಗೆ ಇಲ್ಲವೇ? ಅವರು ಯಾವ ಅರ್ಥದಲ್ಲಿ ಹೇಳಿದ್ದರೂ ಪ್ರಧಾನಿಗಳು ಅಸಮರ್ಥರೆಂದು ಹೇಳಿದಂತೆಯೇ ಆಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ ಸರ್ಕಾರದ ಆಡಳಿತದ ಮೇಲೆ ಸಂಘ ಪರಿವಾರ ಭ್ರಮನಿರಸನಗೊಂಡಿದೆ. ಸಂಘಪರಿವಾರದ ಅಂಗ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ಮಜ್ದೂರ್ ಸಂಘ ಮೊನ್ನೆ ಪುತ್ತೂರಿನಲ್ಲಿ ಕೇಂದ್ರ ಸರ್ಕಾರದ ನೂತನ ಸಾರಿಗೆ ನೀತಿಯನ್ನು ವಿರೋಧಿಸಿ ಪ್ರತಿಭಟನೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮವರಿಂದಲೇ ವಿರೋಧಿಸಲ್ಪಡುತ್ತಿದ್ದಾರೆ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ತಮ್ಮ ಸರ್ವಾಧಿಕಾರಿ ಧೋರಣೆ ಮತ್ತು ಮತ್ತು ತುಘಲಕ್ ನೀತಿಗಳಿಂದ ದೇಶವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಪ್ರಧಾನಿ ಮೋದಿಯವರ ನಿಜರೂಪದ ದರ್ಶನ ಸಂಘಪರಿವಾರದ ಅಂಗಸಂಸ್ಥೆಗಳಿಗೆ ಆಗಿರುವುದು ಸ್ವಾಗತಾರ್ಹ ಎಂದರು.
ಮೋದಿ ಸರ್ಕಾರದ ಮೇಲಿನ ಬಿ.ಎಂ.ಎಸ್.ನ ಕೋಪ ಕೇವಲ ಪುತ್ತೂರಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ಜಿಲ್ಲೆಯಾದ್ಯಂತ ಈ ಭಾವನೆ ಮಡುಗಟ್ಟಿದೆ ಅನ್ನುವುದನ್ನು ಬಿ.ಎಂ.ಎಸ್.ನ ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷರು ಈ ಪ್ರತಿಭಟನಾ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜಲ್ಲಾ ಬಿ.ಎಂ.ಎಸ್. ಉಪಾಧ್ಯಕ್ಷ ಚಂದ್ರಶೇಖರ ಕಬಕ ಒಂದು ವಾರದೊಳಗೆ ಮೋದಿ ಸರಕಾರವು ಏರಿಸಿದ ಶುಲ್ಕಗಳನ್ನು ಹಿಂಪಡೆಯದೇ ಹೋದರೆ ಜಿಲ್ಲೆಯಾದ್ಯಂತ ಆಟೋರಿಕ್ಷಾ ಓಡಾಟವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳುವುದರ ಮೂಲಕ ಕೇಂದ್ರ ಸರಕಾರದ ಮೇಲಿನ ತಮ್ಮ ಆಕ್ರೋಶವನ್ನು ಬಹಿರಂಗಪಡಿಸಿದ್ದಾರೆ. ಸಂಘದ ಅಪ್ಪಣೆಯಿಲ್ಲದೆ ಒಂದು ಸಣ ಹುಲ್ಲುಕಡ್ಡಿಯೂ ಅಲುಗಾಡದ ಸಂಘಪರಿವಾರದಲ್ಲಿ ಈ ಆಕ್ರೋಶ ವ್ಯಕ್ತವಾಗಿರುವುದು ಸಂಘವೂ ಮೋದಿಯವರನ್ನು ವಿರೋಧಿಸುತ್ತಿದೆ ಎಂಬುದರ ಸೂಚನೆಯಾಗಿದೆ. ಬಜರಂಗದಳದ ಕಾರ್ಯಕರ್ತರನ್ನು ನಕಲಿ ಗೋರಕ್ಷಕರು ಎಂದು ಕರೆಯುವುದರ ಮೂಲಕ ಬಜರಂಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಧಾನಿ ಮೋದಿ ಅವರು ಪುನಃ ಸಂಘಪರಿವಾರದ ಆಕ್ರೋಶಕ್ಕೆ ಈಡಾಗಿರುವುದು ಪುತ್ತೂರಿನಲ್ಲಿ ನಡೆದ ಬಿಎಂಎಸ್ ಪ್ರತಿಭಟನೆಯಿಂದ ಸ್ಪಷ್ಟವಾಗಿದೆ ಎಂದರು.
ಪ್ರಧಾನಿ ಮೋದಿಯವರ ನಿರಂಕುಶ ಸರ್ವಾಧಿಕಾರೀ ಆಡಳಿತದಿಂದ ದೇಶಕ್ಕೆ ದೇಶವೇ ಅಸಮಾಧಾನಗೊಂಡಿದ್ದರೆ ಬಿ.ಜೆ.ಪಿ. ಒಳಗೊಳಗೇ ಕುದಿಯುತ್ತಿದೆ. ಅಡ್ವಾಣಿ, ಮುರಳೀಮನೋಹರ ಜೋಷಿ, ಶತ್ರುಘ್ನಸಿಂಹರಂತಹಾ ಹಿರಿಯ ನಾಯಕರು ಆಗೊಮ್ಮೆ ಈಗೊಮ್ಮೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರೆ ಪಕ್ಷದ ಕಾರ್ಯಕರ್ತರು ಹಾಗೂ ಇತರ ನಾಯಕರು ಒಳಗೊಳಗೇ ಕುದಿಯುತ್ತಿದ್ದಾರೆ.
ಪೆಟ್ರೋಲ್-ಡೀಸಿಲ್ ಬೆಲೆಯೇರಿಕೆಯಿಂದ ತೊಡಗಿ ಹೊಸ ಸಾರಿಗೆ ನೀತಿಯವರೆಗೆ ದೇಶದ ಜನರಿಂದ ನಿರಂತರವಾಗಿ ಹಣವನ್ನು ಕಿತ್ತುಕೊಳ್ಳುತ್ತಿರುವ ಮೋದಿಯವರ ನೀತಿಯಿಂದ ಇಡೀ ದೇಶವೇ ಕಂಗೆಟ್ಟಿದ್ದು ಅವರು ಬಿ.ಜೆ.ಪಿ.ಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ನವಂಬರ್ 8ರ ನೋಟ್ ಬ್ಯಾನ್ ನಂತರವಂತೂ ಬಿ.ಜೆ.ಪಿ. ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಎಲ್ಲಿಯವರೆಗೆ ಮೋದಿಯವರು ಅಧಿಕಾರವನ್ನು ತಂದುಕೊಡಬಲ್ಲರೋ ಅಲ್ಲಿಯವರೆಗೆ ಅವರನ್ನು ಸಹಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ಬಿ.ಎಂ.ಎಸ್ ನಡೆಸಿದ ಕೇಂದ್ರ ಸರಕಾರದ ಜನವಿರೋಧಿ ನೂತನ ಸಾರಿಗೆ ಮಸೂದೆಯ ಪ್ರತಿಭಟನೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಹೃತ್ಪೂರ್ವಕವಾಗಿ ಬೆಂಬಲಿಸುತ್ತದೆ.
ಆರ್.ಟಿ.ಓ. ಕಛೇರಿಯಲ್ಲಿ ಹೊಸ ಚಾಲನಾ ಪರವಾನಿಗೆ, ವಾಹನ ಪರವಾನಿಗೆ, ನೊಂದಣಿ ಶುಲ್ಕ, ಟ್ಯಾಕ್ಸ್ ಹೆಚ್ಚಳ, ಪರವಾನಿಗೆ ನವೀಕರಣ ಇವೆಲ್ಲವುಗಳ ದರ ಹೆಚ್ಚಳ ಕೇವಲ ಆಟೋ ರಿಕ್ಷಾಗಳಿಗೆ ಮಾತ್ರವಲ್ಲ, ಸಮಾಜದ ಎಲ್ಲಾ ವರ್ಗದ ಜನರಿಗೂ ಇದರಿಂದ ಹೊಡೆತ ಬೀಳುತ್ತದೆ. ಇಲ್ಲಿಯವರೆಗೆ ವಾಹನಗಳನ್ನು ದುರಸ್ಥಿ ಮಾಡುತ್ತಿದ್ದ ಗ್ಯಾರೇಜುಗಳ ಮೆಕ್ಯಾನಿಕ್ ಗಳಿಗೂ ಈ ನೀತಿ ಹೊಡೆತ ನೀಡಲಿದ್ದು , ಅನೇಕ ಬಡ ಮೆಕ್ಯಾನಿಕ್ ಗಳು ಕೆಲಸ ಕಳೆದುಕೊಳ್ಳುವ ಭೀತಿಯಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ರೈ ಅಂಕೊತ್ತಿಮಾರ್, ಅಮಳ ರಾಮಚಂದ್ರ, ಯವ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ, ಕಾರ್ಯದರ್ಶಿ ರೋಶನ್ ರೈ, ಸೇವಾದಳ ಸಂಘಟಕ ಜೋಕಿಂ ಡಿ’ಸೋಜ ಉಪಸ್ಥಿತರಿದ್ದರು.







