ಟ್ರಂಪ್ ಅವರೇ, ನಿಯಮಗಳನ್ನು ರೂಪಿಸುವುದು ನಾವು, ನೀವಲ್ಲ!
ಅಮೆರಿಕದ ಪತ್ರಕರ್ತರಿಂದ ನಿಯೋಜಿತ ಅಧ್ಯಕ್ಷರಿಗೆ ಬಹಿರಂಗ ಪತ್ರ

ವಾಶಿಂಗ್ಟನ್, ಜ. 19: ಓದುಗರಿಗೆ ಏನನ್ನು ನೀಡಬೇಕು ಎಂದು ನಿರ್ಧರಿಸುವುದು ಹಾಗೂ ನಿಯಮಗಳನ್ನು ರೂಪಿಸುವುದು ಪತ್ರಿಕಾ ವರದಿಗಾರರೇ ಹೊರತು, ನೀವಲ್ಲ ಎಂದು ಅಮೆರಿಕದ ಪತ್ರಕರ್ತರು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬರೆದ ಬಹಿರಂಗ ಪತ್ರವೊಂದರಲ್ಲಿ ಹೇಳಿದ್ದಾರೆ.
‘‘ವಾಸ್ತವವಾಗಿ ನಮ್ಮ ಏರ್‌ಟೈಮ್ ಮತ್ತು ಕಾಲಂ ಇಂಚುಗಳ ಮೇಲೆ ಪ್ರಭಾವ ಬೀರಲು ನೀವು ಪ್ರಯತ್ನಿಸುತ್ತಿದ್ದೀರಿ. ನಮ್ಮ ಓದುಗರು, ಕೇಳುಗರು ಮತ್ತು ವೀಕ್ಷಕರಿಗೆ ಶ್ರೇಷ್ಠ ರೀತಿಯಲ್ಲಿ ಹೇಗೆ ಸೇವೆ ನೀಡಬಹುದು ಎನ್ನುವುದನ್ನು ನಿರ್ಧರಿಸುವುದು ನಾವು, ನೀವಲ್ಲ. ಹಾಗಾಗಿ, ಮುಂದಿನ ನಾಲ್ಕು ವರ್ಷಗಳಲ್ಲಿ ನಮ್ಮಿಂದ ಏನನ್ನು ನಿರೀಕ್ಷಿಸಬೇಕು ಎನ್ನುವುದನ್ನು ಯೋಚಿಸುವಾಗ ಅದರ ಪರಿಣಾಮಗಳೇನು ಎಂಬುದರ ಬಗ್ಗೆಯೂ ಯೋಚಿಸಿ’’ ಎಂದು ‘ಕೊಲಂಬಿಯ ಜರ್ನಲಿಸಂ ರಿವ್ಯೆ’ನಲ್ಲಿ ಪ್ರಕಟಗೊಂಡಿರುವ ಪತ್ರದಲ್ಲಿ ಅಮೆರಿಕದ ಪತ್ರಕರ್ತರು ಹೇಳಿದ್ದಾರೆ.
ಇದು ವೃತ್ತಿಪರ ಪತ್ರಕರ್ತರಿಗಾಗಿ ಕೊಲಂಬಿಯ ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿರುವ ಪತ್ರಿಕೆಯಾಗಿದೆ.ಅಮೆರಿಕನ್ ಪ್ರೆಸ್ ಕಾರ್ಪ್ಸ್ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷರ ದಾರಿ ಬೇರೆ ಬೇರೆ ಎಂಬುದನ್ನು ಒಪ್ಪಿಕೊಂಡಿರುವ ಪತ್ರ, ‘‘ನಮ್ಮ ಸಂಬಂಧ ಹಳಸಿದೆ ಎಂದು ಹೇಳಿದರೆ ನೀವು ಆಶ್ಚರ್ಯಪಡಬೇಕಾಗಿಲ್ಲ’’ ಎಂದರು.
ತನ್ನ ಆಡಳಿತದ ಬಗ್ಗೆ ವರದಿ ಮಾಡಲು ಟ್ರಂಪ್ ಪತ್ರಕರ್ತರಿಗೆ ಅವಕಾಶ ನೀಡಲಿಕ್ಕಿಲ್ಲ ಎನ್ನುವುದನ್ನು ಮನಗಂಡಿರುವ ಪತ್ರವು, ‘‘ಮಾಹಿತಿ ಪಡೆಯುವ ಪರ್ಯಾಯ ವಿಧಾನವನ್ನು ಹುಡುಕುವಲ್ಲಿ ನಾವು ಪರಿಣತಿ ಹೊಂದಿದ್ದೇವೆ. ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ಪ್ರಕಟಗೊಂಡ ಅತ್ಯುತ್ತಮ ವರದಿಗಳನ್ನು ನಿಮ್ಮ ರ್ಯಾಲಿಗಳಿಗೆ ಪ್ರವೇಶವಿರದ ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ. ನಿಮಗೆ ಅನುಮತಿಯಿಲ್ಲ ಎಂಬುದಾಗ ಪತ್ರಕರ್ತರಿಗೆ ಹೇಳುವುದನ್ನು ನಾವು ಬಯಸುವುದಿಲ್ಲ, ಆದರೆ, ಅದನ್ನೊಂದು ಸವಾಲಾಗಿ ನಾವು ಸ್ವೀಕರಿಸುತ್ತೇವೆ’’ ಎಂದಿದೆ.







