ಅಮಾನತು ಮಾಡಿದಾಕ್ಷಣ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲದು: ವಿರೂಪಾಕ್ಷಪ್ಪ

ಬೆಂಗಳೂರು, ಜ. 19: ‘ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿರುವ ಕೆಲ ಮುಖಂಡರನ್ನು ಅಮಾನತ್ತು ಮಾಡಿದ ಕೂಡಲೇ ಬ್ರಿಗೇಡ್‌ನ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಅದೆಷ್ಟು ಮಂದಿ ಅಮಾನತು ಮಾಡುತ್ತಾರೋ ಮಾಡಲಿ’ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಸವಾಲು ಹಾಕಿದ್ದಾರೆ.
ಗುರುವಾರ ನಗರದ ಬಿಲ್ಲವ ಭವನದಲ್ಲಿ ಏರ್ಪಡಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.26ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ‘ಬಿಲಿದಾನ ದಿನಾಚರಣೆ’ ಹಮ್ಮಿಕೊಳ್ಳಲಾಗಿದ್ದು, ರಾಯಣ್ಣ ಬ್ರಿಗೇಡ್ ಶಕ್ತಿ ಪ್ರದರ್ಶನ ಮಾಡಲಿದ್ದೇವೆ ಎಂದರು.
ಆ ಬಳಿಕ ಫೆಬ್ರವರಿ ಕೊನೆ ವಾರದಲ್ಲಿ ಬೆಂಗಳೂರು ಅಥವಾ ಚಿಕ್ಕಮಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೇತೃತ್ವದಲ್ಲಿ ಬೃಹತ್ ಸಮಾವೇಶನ ನಡೆಸಲಾಗುವುದು ಎಂದ ಅವರು, ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಳ್ಳುವ ಎಲ್ಲರನ್ನು ಬಿಜೆಪಿಯಿಂದ ಅಮಾನತು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಬಹುದು. ಆದರೆ, ದಲಿತ ಮತ್ತು ಹಿಂದುಳಿದ ವರ್ಗದ ರಾಯಣ್ಣ ಅಭಿಮಾನಿಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ವಿರೂಪಾಕ್ಷಪ್ಪ ಎಚ್ಚರಿಸಿದರು.
ಬಿಜೆಪಿಗೆ ದಲಿತ-ಹಿಂದುಳಿದ ವರ್ಗದವರ ಮತ ತಂದುಕೊಡುವ ದೃಷ್ಟಿಯಿಂದ ರಾಯಣ್ಣ ಬ್ರಿಗೇಡ್ ಚಟುವಟಿಕೆಯನ್ನು ಸ್ವಾಗತಿಸಬೇಕಿತ್ತು. ಆದರೆ, ಕೆಲವರ ಮಾತುಗಳನ್ನು ಕೇಳಿಕೊಂಡು ಯಡಿಯೂರಪ್ಪ, ಬ್ರಿಗೇಡ್ ಅನ್ನು ನಿರ್ಲಕ್ಷಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜ.26ರಂದು ನಡೆಯಲಿರುವ ಸಮಾವೇಶದಲ್ಲಿ ಬಿಜೆಪಿ ಮಾಜಿ ಸಚಿವರು, ಶಾಸಕರು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬ್ರಿಗೇಡ್ ಚಟುವಟಿಕೆಗೆ ಅಡ್ಡಿಪಡಿಸಿದರೆ ಬಿಜೆಪಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂಬುದನ್ನು ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಗುಡುಗಿದರು.
ಅಮಾನತ್ತು ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಈ ಸಂಬಂಧ ಶೀಘ್ರದಲ್ಲೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮುಖಂಡರ ಬೆದರಿಕೆಗಳಿಗೆ ರಾಯಣ್ಣ ಬ್ರಿಗೇಡ್ ಹೆದರುವುದಿಲ್ಲ ಎಂದರು. ಗೋಷ್ಟಿಯಲ್ಲಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ, ಪುಟ್ಟಸ್ವಾಮಿ, ಸೋಮಶೇಖರ್ ಹಾಜರಿದ್ದರು.
‘ಬ್ರಿಗೇಡ್ ಮೂಲಕ ರಾಜ್ಯಾದ್ಯಂತ ಪ್ರವಾಸ ನಡೆಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶವಿತ್ತು. ಆದರೆ, ಅದು ಅವರಿಗೆ ಬೇಕಿಲ್ಲ ಎಂದ ಮೇಲೆ ತಾವು ಅವರನ್ನು ಸಿಎಂ ಮಾಡುವ ಉದ್ದೇಶದಿಂದ ಹಿಂದೆ ಸರಿದಿದ್ದೇವೆ’
-ಕೆ.ವಿರೂಪಾಕ್ಷಪ್ಪಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಧ್ಯಕ್ಷ







