ಆರ್‌ಎಲ್‌ಡಿ ಜೊತೆ ಮೈತ್ರಿ ಇಲ್ಲ : ಉ.ಪ್ರದೇಶದಲ್ಲಿ ಕಾಂಗ್ರೆಸ್ - ಎಸ್‌ಪಿ ಮೈತ್ರಿ ಅಂತಿಮ

ಲಕ್ನೊ, ಜ.19: ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಜೊತೆ ಯಾವುದೇ ಚುನಾವಣಾ ಮೈತ್ರಿ ಇಲ್ಲ ಎಂದು ಸಮಾಜವಾದಿ ಪಕ್ಷ(ಎಸ್‌ಪಿ) ಘೋಷಿಸುವುದರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ‘ಮಹಾ ಘಟ್‌ಬಂಧನ’ ರೂಪುಗೊಳ್ಳುವ ಸಾಧ್ಯತೆ ಅಂತ್ಯವಾಗಿದೆ. ಈ ಮಧ್ಯೆ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿ ಅಬಾಧಿತವಾಗಿದೆ ಎಂದು ಸಮಾಜವಾದಿ ಪಕ್ಷ ತಿಳಿಸಿದೆ.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪಕ್ಷದ ಹಿರಿಯ ಸದಸ್ಯರ ಜೊತೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಯಿತು. ಕಾಂಗ್ರೆಸ್ ಜೊತೆ ಮಾತ್ರ ಮೈತ್ರಿ ಏರ್ಪಡಲಿದೆ. ಆರ್‌ಎಲ್‌ಡಿ ಜೊತೆ ಯಾವುದೇ ಮೈತ್ರಿ ಇಲ್ಲ. 403 ಸ್ಥಾನಗಳಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎಸ್‌ಪಿ ಮತ್ತು ಉಳಿದ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ . ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೀಟು ಹಂಚಿಕೆ ಒಪ್ಪಂದದ ಕುರಿತು ವಿವರ ನೀಡಲಿದ್ದಾರೆ ಎಂದು ಎಸ್‌ಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್‌ಮಯಿ ನಂದ ಪಿಟಿಐಗೆ ತಿಳಿಸಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಹಂತದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಇದೀಗ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ನಿರ್ಧರಿಸಬೇಕಿದೆ . ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ವಿಧಾನಸಭೆಯಲ್ಲಿ ನಾವು ನಿಚ್ಚಳ ಬಹುಮತ ಗಳಿಸಿ, ಅಖಿಲೇಶ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಣಾಳಿಕೆಯನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಆರ್‌ಎಲ್‌ಡಿ ಹೆಚ್ಚು ಸ್ಥಾನಗಳನ್ನು ಅಪೇಕ್ಷಿಸಿದ ಕಾರಣ ಮೈತ್ರಿ ಮಾತುಕತೆ ವಿಫಲವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.







