ನ್ಯಾಯಾಲಯದಲ್ಲಿ ದಾಖಲೆ ಕಳ್ಳತನ: ಆರೋಪಿಗೆ ಶಿಕ್ಷೆ
ಚಿಕ್ಕಮಗಳೂರು, ಜ.19: ನ್ಯಾಯಾಲಯದ ಕಚೇರಿಯಲ್ಲಿ ಸಿಬ್ಬಂದಿ ಕೊಠಡಿಯಲ್ಲಿಟ್ಟಿದ್ದ ಕ್ರಿಮಿನಲ್ ಮೇಲ್ಮನವಿಯ ದಾಖಲೆಯನ್ನು ಕದ್ದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಸಿ.ಜೆ.ಎಂ ನ್ಯಾಯಾಲಯವು ತೀರ್ಪು ನೀಡಿದೆ.
2009ರ ಫೆ.3ರಂದು ಚಿಕ್ಕಮಗಳೂರಿನ ತ್ವರಿತಗತಿ 2ನೆ ನ್ಯಾಯಾಲಯ ಕಚೇರಿಯಲ್ಲಿನ ಸಿಬ್ಬಂದಿಯ ಕೊಠಡಿಯಲ್ಲಿ ಇಟ್ಟಿದ್ದ ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 12/1999 ರಲ್ಲಿನ ಕಡತದಲ್ಲಿದ್ದ ದಾಖಲೆಗಳನ್ನು ಕದ್ದಿದ್ದರಿಂದ ಆರೋಪಿ ಮೋಹನ್ ಎಂಬಾತನ ಮೇಲೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಸಿ.ಜೆ.ಎಂ ನ್ಯಾಯಾಲಯಕ್ಕೆ ದೋಷಾರೋಪಣೆಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಮೋಹನ್‌ಗೆ ಕ್ರಿಮಿನಲ್ ಮೇಲ್ಮನವಿ ದಾಖಲೆಗಳನ್ನು ಕದ್ದಿದ್ದ ವ್ಯಕ್ತಿಗೆ ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ ಎಂದು ಪ್ರಧಾನ ಸಿ.ಜೆ.ಎಂ ನ್ಯಾಯಾಲಯದ ನ್ಯಾ. ದಯಾನಂದ್ ಹಿರೇಮಠ್ ಅವರು, ಆರೋಪಿಗೆ 5 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ರೂ. 7,000 ದಂಡವನ್ನು ಪಾವತಿಸಲು ಆದೇಶಿಸಿದೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಕೆ.ಎಸ್. ವೀಣಾ ವಾದ ಮಂಡಿಸಿದ್ದರು.





