ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮ ನೇಮಕ
ಹೊಸದಿಲ್ಲಿ, ಜ.19: ದಿಲ್ಲಿ ಪೊಲೀಸ್ ಕಮಿಷನರ್ ಅಲೋಕ್ ವರ್ಮ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ವರ್ಮ ಸೇವಾವಧಿ ಎರಡು ವರ್ಷ ಆಗಿರುತ್ತದೆ.
ಈ ಹಿಂದೆ ನಿರ್ದೇಶಕರಾಗಿದ್ದ ಅನಿಲ್ ಸಿನ್ಹಾ ಡಿ.2ರಂದು ನಿವೃತ್ತರಾದ ಬಳಿಕ ಹಂಗಾಮಿ ನಿರ್ದೇಶಕರಾಗಿ ರಾಕೇಶ್ ಅಸ್ತಾನಾ ಅವರನ್ನು ನೇಮಕಗೊಳಿಸಲಾಗಿತ್ತು. ಇದೀಗ ಅಸ್ತಾನಾ ಅವರು ಅಲೋಕ್ ವರ್ಮರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಪ್ರಧಾನಿ ಮೋದಿ, ಭಾರತದ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೇಹರ್ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡಿರುವ ಸಮಿತಿಯು ವರ್ಮ ಅವರನ್ನು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆ ಮಾಡಿದೆ. ಅರುಣಾಚಲ ಪ್ರದೇಶ-ಗೋವಾ-ಮಿರೆರಂ ಮತ್ತು ಕೇಂದ್ರಾಡಳಿತ ಪ್ರದೇಶ ಕೇಡರ್‌ನ 1979ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ವರ್ಮ ಕಳೆದ ಫೆಬ್ರವರಿಯಲ್ಲಿ ದಿಲ್ಲಿ ಪೊಲೀಸ್ ಆಯುಕ್ತರಾಗಿ ನಿಯುಕ್ತರಾಗುವ ಮೊದಲು ತಿಹಾರ್ ಜೈಲಿನ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.





