ರಿಯಲ್ ಎಸ್ಟೇಟ್‌ನಲ್ಲಿ ಝಾಕಿರ್ ನಾಯ್ಕ 100 ಕೋ.ರೂ ಹೂಡಿಕೆ: ಎನ್‌ಐಎ ವಿಚಾರಣೆ ಸಾಧ್ಯತೆ
ಹೊಸದಿಲ್ಲಿ,ಜ.19: ವಿದ್ವಾಂಸ ಡಾ.ಝಾಕಿರ್ ನಾಯ್ಕಾಗೆ ಸೇರಿದ 78 ಬ್ಯಾಂಕ್ ಖಾತೆಗಳು ಮತ್ತು ಮುಂಬೈ ಸುತ್ತಮುತ್ತ ರಿಯಲ್ ಎಸ್ಟೇಟ್‌ನಲ್ಲಿ ಅವರು ಮತ್ತು ಅವರ ಸಹಚರರಿಂದ ಕನಿಷ್ಠ 100 ಕೋ.ರೂ.ಹೂಡಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ನಾಯ್ಕೆ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದ ಮತ್ತು ಕೋಮು ಸೌಹಾರ್ದಕ್ಕೆ ಭಂಗವನ್ನುಂಟು ಮಾಡುವ ಕೃತ್ಯಗಳನ್ನು ನಡೆಸುತ್ತಿದ್ದ ಆರೋಪದಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ನಾಯ್ಕಿ ಮತ್ತು ಇತರರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಎನ್‌ಐಎ ನಾಯ್ಕೆ ಜೊತೆ ನಂಟು ಹೊಂದಿದ್ದ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳು ಸೇರಿದಂತೆ 23 ಸಂಸ್ಥೆಗಳ ಪಾತ್ರವನ್ನು ಪತ್ತೆ ಹಚ್ಚಿದೆಯೆಂದು ಮೂಲಗಳು ತಿಳಿಸಿದವು. ತನ್ನ ತನಿಖೆಗೆ ಸಂಬಂಧಿಸಿದಂತೆ ನಾಯ್ಕಿ ಸೋದರಿ ನೈಲ್ಹಾ ನೌಷಾದ್ ನೂರಾನಿ ಸೇರಿದಂತೆ ಅವರ ಸುಮಾರು 20 ಸಹಚರರನ್ನು ಎನ್‌ಐಎ ಪ್ರಶ್ನಿಸಿದೆ. ಅವರಿಂದ ಆದಾಯ ತೆರಿಗೆ ರಿಟರ್ನ್ ಮತ್ತು ಇತರ ಕೆಲವು ದಾಖಲೆಗಳನ್ನು ಅದು ಕೇಳಿದೆ.
ಜೊತೆಗೆ ದೇಶದಲ್ಲಿಯ ವಿವಿಧ ಬ್ಯಾಂಕುಗಳಲ್ಲಿಯ 78 ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಇದು ಮುಗಿದ ಬಳಿಕ ವಿಚಾರಣೆಗಾಗಿ ನಾಯ್ಕಿರನ್ನು ಕರೆಸಲು ನಾವು ಉದ್ದೇಶಿಸಿದ್ದೇವೆ. ಪ್ರಕರಣದಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ವೀಡಿಯೊಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಮುಂಬೈನ ಹಾರ್ಮನಿ ಮೀಡಿಯಾ ಪ್ರೈ.ಲಿ.ನ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದವು.





