ಹೆಚ್ಚುತ್ತಿರುವ ಸಂಘರ್ಷ, ಭಿನ್ನಾಭಿಪ್ರಾಯ
ರಾಷ್ಟ್ರಪತಿ ಕಳವಳ
ದಾಂತನ್(ಪ.ಬಂಗಾಲ), ಜ.19: ಸಮಾಜದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಸ್ಥಿತಿ ಮತ್ತು ಭಿನ್ನಾಭಿಪ್ರಾಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪರಸ್ಪರರಲ್ಲಿ ಗೌರವದ ಭಾವನೆಯನ್ನು ವರ್ಧಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಪತ್ರಿಕೆ ಅಥವಾ ಟಿವಿ ವೀಕ್ಷಿಸುವ ಸಂದರ್ಭ ಹಿಂಸೆಯ ವೈಭವೀಕರಣ ಗಮನಿಸಬಹುದು. ಅಂತಾರಾಷ್ಟ್ರೀಯ ಹಿಂಸೆಯ ವಿಷಯದ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ನಮ್ಮ ಪ್ರಜ್ಞೆಯಲ್ಲಿರುವ, ಮನಸ್ಸಿನಲ್ಲಿರುವ ಹಿಂಸಾ ಪ್ರವೃತ್ತಿಯನ್ನು, ಆತ್ಮಸಾಕ್ಷಿಯ ತಾಕಲಾಟವನ್ನು ಇಲ್ಲಿ ಉಲ್ಲೇಖಿಸಬಹುದು ಎಂದು ಅವರು ನುಡಿದರು.
ಪಶ್ಚಿಮ ಬಂಗಾಲದ ಮೇದಿನಿಪುರ ಜಿಲ್ಲೆಯ ಸಣ್ಣಪಟ್ಟಣವಾದ ಡಾಂಟನ್‌ನಲ್ಲಿ ನಡೆಯುತ್ತಿರುವ 28ನೆ ದಾಂತನ್ ಗ್ರಾಮೀಣ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೈನಂದಿನ ಬದುಕಿನ ಸಣ್ಣಪುಟ್ಟ ಘಟನೆಗಳನ್ನೂ ಗಮನಿಸಿ. ಭಿನ್ನಾಭಿಪ್ರಾಯ ಈ ಹಿಂದೆಯೂ ಇತ್ತು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಭಿನ್ನಾಭಿಪ್ರಾಯ ದಿನೇದಿನೇ ಹೆಚ್ಚುತ್ತಿದೆ. ಈ ಹಿಂದೆ ಇಂತಹ ವಿಚಾರಭೇದ ಅಥವಾ ಭಿನ್ನಾಭಿಪ್ರಾಯದ ವಿಷಯಗಳನ್ನು ಸ್ಥಳೀಯ ಮಟ್ಟದಲ್ಲಿ ಇತ್ಯರ್ಥಗೊಳಿಸಲಾಗುತ್ತಿತ್ತು. ಆದರೆ ಈಗ ಅದು ಸ್ಥಳೀಯ ಪರಿಮಿತಿ ದಾಟಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಜಗತ್ತು ಹೆಚ್ಚು ಹಿಂಸಾತ್ಮಕವಾಗುತ್ತಿದೆ. ಇದು ಸಮಾಜದಲ್ಲಿರುವ ಸಾಮಾನ್ಯ ಪ್ರವೃತ್ತಿ ಎಂದು ಹೇಳುವಂತಿಲ್ಲ. ಜನರು ಪರಸ್ಪರರನ್ನು ಗೌರವಿಸುತ್ತಿದ್ದಾರೆ. ಪರಸ್ಪರರ ಭಾವನೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪರಸ್ಪರರನ್ನು ಪ್ರೀತಿಸು ಎಂಬುದು ಮನುಷ್ಯನ ಮನೋಭಾವವಾಗಿದೆ. ದ್ವೇಷ ಹರಡು ಎಂಬುದಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಪರಸ್ಪರರಲ್ಲಿ ಗೌರವದ ಭಾವನೆ ಬೆಳೆಸುವ ಕಾರ್ಯ ನಡೆಯಬೇಕು ಎಂದವರು ಹೇಳಿದರು. ದಾಂತನ್ ಗ್ರಾಮೀಣ ಮೇಳವು ಭ್ರಾತೃತ್ವದ ಭಾವನೆ ಬೆಳೆಯಲು, ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಮತ್ತು ಜನರಲ್ಲಿ ಶಾಂತಿಯುತ ಸಹಬಾಳ್ವೆಯ ಭಾವನೆ ಬೆಳೆಯಲು ಸಹಕಾರಿ ಎಂದವರು ಹೇಳಿದರು.







