ಮನಮೋಹನ್ ಆರ್‌ಬಿಐ ಮಾನ ಕಾಪಾಡಿದರು; ಮೋದಿ ಮಾನ ಕಳೆದರು
ಕಾಂಗ್ರೆಸ್ ಟೀಕಾಸ್ತ್ರ
ಹೊಸದಿಲ್ಲಿ, ಜ.19: ಸಂಸದೀಯ ಸ್ಥಾಯಿ ಸಮಿತಿಯ ಎದುರು ಹೇಳಿಕೆ ನೀಡಲು ಹಾಜರಾಗಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಮುಜುಗುರವಾಗುವುದನ್ನು ತಪ್ಪಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ರಮವನ್ನು ಇದೀಗ ಕಾಂಗ್ರೆಸ್ ಪಕ್ಷದವರು ಪ್ರಧಾನಿ ಮೋದಿಯ ವಿರುದ್ಧ ಟೀಕಾ ಪ್ರಹಾರಕ್ಕೆ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಮನಮೋಹನ್ ಸಿಂಗ್ ಅವರು ಆರ್‌ಬಿಐಯನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ರಕ್ಷಿಸಿದರು. ಆದರೆ ಮೋದಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡು ರಿಸರ್ವ್ ಬ್ಯಾಂಕ್‌ನ ಸ್ವಾತಂತ್ರ ಮತ್ತು ಸ್ವಾಯತ್ತೆಯನ್ನು ನಾಶಗೊಳಿಸಿದರು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. ಸಂಸದೀಯ ಸ್ಥಾಯೀ ಸಮಿತಿಯ ಸದಸ್ಯರಾಗಿರುವ ಮತ್ತೋರ್ವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ತಮ್ಮ ಟೀಕಾಸ್ತ್ರವನ್ನು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರತ್ತ ಎಸೆದಿದ್ದಾರೆ. ರಿಸರ್ವ್ ಬ್ಯಾಂಕ್‌ನ ಈ ಹಿಂದಿನ ಗವರ್ನರ್(ರಘುರಾಮ್ ರಾಜನ್) ಮತ್ತು ಹಾಲಿ ಗವರ್ನರ್‌ರ ಹೇಳಿಕೆಯನ್ನು ಆಲಿಸುವ ಅವಕಾಶ ನನಗೆ ಒದಗಿ ಬಂದಿದೆ. ಇಬ್ಬರ ಹೇಳಿಕೆಯ ನಡುವೆ ಅದೆಷ್ಟು ವ್ಯತ್ಯಾಸವಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನೋಟು ಅಮಾನ್ಯತೆ ವಿರೋಧಿಸಿ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ಮನಮೋಹನ್ ಸಿಂಗ್, ಇದೊಂದು ಚಿರಸ್ಮರಣೀಯ ವೈಫಲ್ಯ ಮತ್ತು ಸಂಘಟಿತ ಲೂಟಿ ಎಂದಿದ್ದರು. ಬುಧವಾರ ಆರ್‌ಬಿಐ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್, ನೋಟು ಅಮಾನ್ಯದ ಗೊಂದಲದ ಹೊಣೆ ಹೊತ್ತು ಮತ್ತು ಸ್ವಾಯತ್ತ ಸಂಸ್ಥೆಯಾಗಿರುವ ರಿಸರ್ವ್ ಬ್ಯಾಂಕನ್ನು ಕೇಂದ್ರ ಸರಕಾರದ ಮುಖವಾಣಿಯನ್ನಾಗಿಸಿದ ಕಾರಣಕ್ಕೆ ಆರ್‌ಬಿಐ ಗವರ್ನರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಸ್ವೇಚ್ಛಾಚಾರಿ ಪ್ರಧಾನಿ ದೇಶವನ್ನು ಆರ್ಥಿಕ ಅರಾಜಕತೆಯ ಸ್ಥಿತಿಗೆ ತಂದಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.





