ಶ್ರೀರಾಮ್ ಟ್ರಾನ್ಸ್‌ಪೊರ್ಟ್ ನಿಂದ ವಿದ್ಯಾರ್ಥಿ ವೇತನ ವಿತರಣೆ
.jpg)
ಮೂಡುಬಿದಿರೆ ,ಜ.19 : ಬಡವ - ಶ್ರೀಮಂತರೆನ್ನುವ ಅಂತರಗಳು ಕಳೆದು ಸಮಾನತೆಗಳು ಬರಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅಗತ್ಯವಿದ್ದು, ಹಲವು ತ್ಯಾಗಗಳೊಂದಿಗೆ ಕಠಿಣವಾದ ದಾರಿಯಲ್ಲಿ ಸಫಲತೆಯನ್ನು ಕಾಣಲು ಪ್ರಯತ್ನಿಸಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಅವರು ಶ್ರೀರಾಮ್ ಟ್ರಾನ್ಸ್‌ಫೋರ್ಟ್ ಪೈನಾನ್ಸ್ ಕಂಪನಿ ಲಿಮಿಟೆಡ್ ಮೂಡುಬಿದಿರೆ ಶಾಖೆಯಿಂದ ಚಾಲಕ ಮತ್ತು ಮಾಲಕರ 109 ವಿದ್ಯಾರ್ಥಿಗಳಿಗೆ ತಲಾ 3,000ದಂತೆ ರೂ 3,27000 ವಿದ್ಯಾರ್ಥಿವೇತನವನ್ನು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಿ. ನಿಮಗಾಗಿ ಸರಕಾರ ಮತ್ತು ಸಂಘ ಸಂಸ್ಥೆಗಳು ಸದಾ ಪ್ರೋತ್ಸಾಹವನ್ನು ನೀಡುತ್ತಿದೆ . ಇದನ್ನು ತಾವು ಅರಿತುಕೊಂಡು ಮುಂದಿನ ಪರೀಕ್ಷೆಗಳಿಗೆ ತಯಾರಾಗಿ ಎಂದು ಹೇಳಿದ ಅವರು, ಶ್ರೀರಾಮ್ ಪೈನಾನ್ಸ್ ಕಂಪನಿಯು ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ನೀಡುವ ಮೂಲಕ ದೇವರು ಮೆಚ್ಚುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಶರತ್ಚಂದ್ರ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ , ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ವಾಹನಗಳ ಖರೀದಿಗೆ ಹಾಗೂ ವ್ಯವಹಾರ ಉದ್ಯಮಗಳಿಗೆ ಸುಲಭವಾಗಿ ಬ್ಯಾಂಕ್ ಲೋನ್ ನೀಡಲಾಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯ ರತ್ನಾಕರ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು.
ವಾಮಂಜೂರು ಅಮೃತೇಶ್ವರ ದೇವಸ್ಥಾನದ ಆಡಳಿತ ಟ್ರಸ್ಟಿ ಶರತ್‌ಶೆಟ್ಟಿ, ಶಕ್ತಿ ಕಾಂಟ್ರಕ್ಷನ್‌ನ ಧೀರಜ್ ಕುಮಾರ್, ಉದ್ಯಮಿ ಪ್ರವೀಣ್ ಕುಮಾರ್ ಜೈನ್, ಆಲ್ವೀನ್ ಮಿನೇಜಸ್, ಮೂಡುಬಿದಿರೆ ಟ್ಯಾಕ್ಸಿ ಅಸೋಸಿಯೇಶನ್‌ನ ಅಧ್ಯಕ್ಷ ದಾಮೋಧರ ಕೋಟ್ಯಾನ್ ಮತ್ತು ಅಳದಂಗಡಿ ಅಟೋ ಚಾಲಕರ ಸಂಘದ ಕಾರ್ಯದರ್ಶಿ ಶಶಿಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಶಿಕಾಂತ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ರಿಜಿನಲ್ ಕಲೆಕ್ಷನ್ ಹೆಡ್ ನಾಗರಾಜ ವಂದಿಸಿದರು.







