ಸ್ಮಿತ್ ಶತಕ, ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

ಪರ್ತ್, ಜ.19: ನಾಯಕ ಸ್ಟೀವನ್ ಸ್ಮಿತ್ ಆಕರ್ಷಕ ಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನದ ವಿರುದ್ಧದ ಮೂರನೆ ಏಕದಿನ ಪಂದ್ಯವನ್ನು ಏಳು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 7 ವಿಕೆಟ್‌ಗಳ ನಷ್ಟಕ್ಕೆ 263 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆತಿಥೇಯ ತಂಡ ಇನ್ನೂ 30 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು.
ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಗೆಲ್ಲಲು ಸ್ಪರ್ಧಾತ್ಮಕ ಮೊತ್ತ ಪಡೆದಿದ್ದ ಆಸ್ಟ್ರೇಲಿಯದ ಪರ ನಾಯಕ ಸ್ಮಿತ್ ಹಾಗೂ ಚೊಚ್ಚಲ ಪಂದ್ಯ ಆಡಿರುವ ಪೀಟರ್ ಹ್ಯಾಂಡ್ಸ್‌ಕಾಂಬ್ 3ನೆ ವಿಕೆಟ್‌ಗೆ 183 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು.
ಪಾಕಿಸ್ತಾನಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ, ಅದು ತನ್ನ ಸಾಮಾನ್ಯ ತಪ್ಪುಗಳಿಗೆ ಬೆಲೆ ತೆತ್ತಿತು. ಪಾಕ್ 5 ಎಸೆತಗಳ ಅಂತರದಲ್ಲಿ ಆಸೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್(35) ಹಾಗೂ ಉಸ್ಮಾನ್ ಖ್ವಾಜಾ(9) ವಿಕೆಟ್‌ಗಳನ್ನು ಕಬಳಿಸಿತ್ತು. ಆಗ ಆಸೀಸ್‌ನ ಸ್ಕೋರ್ 2 ವಿಕೆಟ್‌ಗೆ 45 ರನ್.
ಚೊಚ್ಚಲ ಪಂದ್ಯ ಆಡಿದ್ದ ಹ್ಯಾಂಡ್ಸ್‌ಕಾಂಬ್ ಜುನೈದ್‌ಖಾನ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆಗ ಆಸೀಸ್ 3ಕ್ಕೆ 46 ರನ್ ಗಳಿಸಿತ್ತು. ಆದರೆ, ಖಾನ್ ಎಸೆದಿದ್ದ ಎಸೆತ ನೋ-ಬಾಲ್ ಆಗಿದ್ದ ಕಾರಣ ಹ್ಯಾಂಡ್ಸ್‌ಕಾಂಬ್ ಮೊದಲ ಜೀವದಾನ ಪಡೆದಿದ್ದರು.
10 ರನ್ ಗಳಿಸಿದ್ದಾಗ ಹ್ಯಾಂಡ್ಸ್‌ಕಾಂಬ್ ಮತ್ತೊಮ್ಮೆ ಜೀವದಾನ ಪಡೆದಿದ್ದರು. ಪಾಕ್ ಫೀಲ್ಡರ್ ಸುಲಭಕ್ಯಾಚ್ ಕೈಚೆಲ್ಲಿದ ಕಾರಣ ಜುನೈದ್ ಖಾನ್‌ಗೆ ಮತ್ತೊಂದು ವಿಕೆಟ್ ನಷ್ಟವಾಯಿತು.
2 ಬಾರಿ ಜೀವದಾನ ಪಡೆದಿದ್ದ ಹ್ಯಾಂಡ್ಸ್‌ಕಾಂಬ್ 84 ಎಸೆತಗಳಲ್ಲಿ 82 ರನ್ ಗಳಿಸಿ ಪಾಕಿಸ್ತಾನಕ್ಕೆ ದುಬಾರಿಯಾಗಿ ಪರಿಣಮಿಸಿದರು.
ತಾನೆದುರಿಸಿದ್ದ 97ನೆ ಎಸೆತವನ್ನು ಬೌಂಡರಿಗೆರೆ ದಾಟಿಸಿದ ಸ್ಮಿತ್ 8ನೆ ಶತಕ ಪೂರೈಸಿದರು. ಅಜೇಯ 108 ರನ್ ಗಳಿಸಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ಉತ್ತಮ ಆರಂಭವನ್ನು ಪಡೆದಿದ್ದರೂ ಹೇಝಲ್‌ವುಡ್(3-32) ದಾಳಿಗೆ ತತ್ತರಿಸಿ 263 ರನ್ ಗಳಿಸಿತು.
ಹೇಝಲ್‌ವುಡ್ ಅವರು ಪಾಕ್ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದ ಬಾಬರ್ ಆಝಂ(84 ರನ್, 100 ಎಸೆತ), ಉಮರ್ ಅಕ್ಮಲ್(39) ಹಾಗೂ ಆರಂಭಿಕ ಆಟಗಾರ ಮುಹಮ್ಮದ್ ಹಫೀಝ್(4) ವಿಕೆಟ್‌ಗಳನ್ನು ಕಬಳಿಸಿದ್ದರು.
ಶಾರ್ಜೀಲ್ ಖಾನ್(50) ಅವರೊಂದಿಗೆ 2ನೆ ವಿಕೆಟ್‌ಗೆ 49 ರನ್ ಸೇರಿಸಿದ ಬಾಬರ್ ಅವರು ಶುಐಬ್ ಮಲಿಕ್(39) ಅವರೊಂದಿಗೆ 4ನೆ ವಿಕೆಟ್‌ಗೆ 63 ರನ್ ಜೊತೆಯಾಟ ನಡೆಸಿದ್ದರು. ಮಲಿಕ್ ಔಟಾದ ಬಳಿಕ ಅಕ್ಮಲ್‌ರೊಂದಿಗೆ 5ನೆ ವಿಕೆಟ್‌ಗೆ 60 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಆಕರ್ಷಕ ಬ್ಯಾಟಿಂಗ್ ಮಾಡಿದ ಬಾಬರ್ ಅವರು ಹ್ಯಾಂಡ್ಸ್‌ಕಾಂಬ್‌ಗೆ ಔಟಾಗುವ ಮೊದಲು ಅತ್ಯಂತ ವೇಗವಾಗಿ 1000 ರನ್ ಪೂರೈಸಿದರು. ಬಾಬರ್ 31 ಹಾಗೂ 74 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 50 ಓವರ್‌ಗಳಲ್ಲಿ 263/7
(ಬಾಬರ್ ಆಝಂ 84, ಶಾರ್ಜೀಲ್ ಖಾನ್ 50, ಶುಐಬ್ ಮಲಿಕ್ 39, ಉಮರ್ ಅಕ್ಮಲ್ 39, ಹೇಝಲ್‌ವುಡ್ 3-32)
ಆಸ್ಟ್ರೇಲಿಯ: 45 ಓವರ್‌ಗಳಲ್ಲಿ 265/3
(ಸ್ಮಿತ್ ಅಜೇಯ 108, ಹ್ಯಾಂಡ್ಸ್‌ಕಾಂಬ್ 82, ವಾರ್ನರ್ 35, ಆಮಿರ್ 1-36)
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್.







