ಉಡುಪಿ: ನಾಳೆ ಮಾಧ್ಯಮ ಅಕಾಡಮಿಯಿಂದ ವಿಚಾರ ಸಂಕಿರಣ
ಉಡುಪಿ, ಜ.19: ‘ಕರಾವಳಿ ಸಮಸ್ಯೆಗಳು-ಪರಿಹಾರ ಮಾಧ್ಯಮಗಳ ಪಾತ್ರ’ ಎಂಬ ವಿಷಯದ ಕುರಿತು ಕರ್ನಾಟಕ ಮಾಧ್ಯಮ ಅಕಾಡಮಿ, ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣವನ್ನು ನಾಯರ್‌ಕೆರೆಯಲ್ಲಿರುವ ಐಎಂಎ ಭವನದಲ್ಲಿ ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಪರಿಸರ ತಜ್ಞ ಡಾ.ಎಚ್.ಸಿ.ಶರತ್‌ಚಂದ್ರ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.
ಮಾಧ್ಯಮ ಅಕಾಡಮಿ ಅಧ್ಯಕ್ಷ ಎಂ.ಸಿದ್ದರಾಜು, ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಹಾಗೂ ಇತರ ಜನಪ್ರತಿನಿಧಿಗಳು ಉಪಸ್ಥಿತರಿರುವರು. ಬಳಿಕ ನಡೆಯುವ ಗೋಷ್ಠಿಗಳಲ್ಲಿ ಹಿರಿಯ ಪತ್ರಕರ್ತ ಎ.ವಿ.ಬಾಲಕೃಷ್ಣ ಹೊಳ್ಳ ಹಾಗೂ ಗಂಗಾಧರ ಹಿರೇಗುತ್ತಿ ವಿಷಯ ಮಂಡನೆ ಮಾಡಲಿದ್ದಾರೆ.
ಅಪರಾಹ್ನ 1:30ರಿಂದ ಪತ್ರಕರ್ತರ ಸಂಘದ ವತಿಯಿಂದ ಹಾಸ್ಯ ನಾಟಕ ‘ಸೆಕೆಂಡ್ ಹ್ಯಾಂಡ್ ಸದಾಶಿವ’, ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಯಕ್ಷ ರೂಪಕ ‘ನಳ ಕಾರ್ಕೋಟಕ’ ಹಾಗೂ ಕಾರ್ಯಕ್ರಮ ವೈವಿಧ್ಯಗಳು ಪ್ರದರ್ಶನಗೊಳ್ಳಲಿವೆ.
ಕಾರ್ಯಾಗಾರ: ಜ.22ರಂದು ಪತ್ರಕರ್ತರಿಗೆ ತರಬೇತಿ ಕಾರ್ಯಾಗಾರ ಐಎಂಎ ಭವನದಲ್ಲಿ ಬೆಳಗ್ಗೆ 10:30ರಿಂದ ನಡೆಯಲಿದೆ. ಹಿರಿಯ ಪತ್ರಕರ್ತ ಹಾಗೂ ನಾಟಕ ಅಕಾಡಮಿ ಸದಸ್ಯ ಗುಡಿಹಳ್ಳಿ ನಾಗರಾಜ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಎಂ.ಸಿದ್ದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಬಳಿಕ ಹಿರಿಯ ಪತ್ರಕರ್ತ ದೇವು ಪತ್ತಾರ್, ವಿನೋದ್ ಕುಮಾರ್ ನಾಯಕ್, ಹೃಷಿಕೇಶ್ ಬಹದ್ದೂರ್ ದೇಸಾಯಿ ಹಾಗೂ ಲೋಕೇಶ್ ಮೊಸಳೆ ವಿವಿಧ ವಿಷಯಗಳ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ನಂತರ ಪತ್ರಕರ್ತರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ತಿಳಿಸಿದರು.
ಸಂಘದ ಪ್ರ.ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು, ಕೋಶಾಧಿಕಾರಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.







