ಸಿಬಿಐ ನಿರ್ದೇಶಕರ ನೇಮಕ ಬಗ್ಗೆ ಆಯ್ಕೆ ಸಮಿತಿ ಸದಸ್ಯ ಖರ್ಗೆ ಆಕ್ಷೇಪ

ಹೊಸದಿಲ್ಲಿ, ಜ.20: ದಿಲ್ಲಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ವರ್ಮಾ ಅವರನ್ನು ಹೊಸ ಸಿಬಿಐ ನಿರ್ದೇಶಕರಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಉನ್ನತಾಧಿಕಾರದ ಆಯ್ಮೆ ಸಮಿತಿ ಬಂದಿದ್ದು, ಇದಕ್ಕೆ ಆಯ್ಕೆ ಸಮಿತಿ ಸದಸ್ಯ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೂರು ಪುಟಗಳ ಅಭಿಪ್ರಾಯ ಭೇದದ ಟಿಪ್ಪಣಿಯನ್ನು ಅವರು ದಾಖಲಿಸಿದ್ದಾರೆ. ವರ್ಮಾ ಅವರ ಅನನುಭವ, ಮಾನದಂಡದಿಂದ ದೂರ ಸರಿದಿರುವುದು ಮತ್ತಿತರ ಅಂಶಗಳನ್ನು ಉಲ್ಲೇಖಿಸಿರುವ ಖರ್ಗೆ, ಮತ್ತೊಬ್ಬ ಅಧಿಕಾರಿ ರೂಪಕ್ ಕುಮಾರ್ ದತ್ತಾ ಅವರನ್ನು ಸೂಕ್ತ ಅಭ್ಯರ್ಥಿ ಎಂದು ಶಿಫಾರಸು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಮೂವರು ಸದಸ್ಯರ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇರ್ ಕೂಡಾ ಇದ್ದಾರೆ. ಸೋಮವಾರ ಅಭ್ಯರ್ಥಿಯನ್ನು ಅಂತಿಮಪಡಿಸುವ ಸಲುವಾಗಿ ಸಭೆ ನಡೆಸಲಾಗಿತ್ತು.
ತಮ್ಮ ಆಕ್ಷೇಪ ಟಿಪ್ಪಣಿಯಲ್ಲಿ ಖರ್ಗೆ ಹಲವು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದು, ಶಿಫಾರಸು ಮಾಡಲಾದ ಅಭ್ಯರ್ಥಿಯಲ್ಲಿ ಪ್ರಮುಖವಾಗಿ ಭ್ರಷ್ಟಾಚಾರ ವಿರೋಧಿ ಕೇತ್ರದಲ್ಲಿ ಅನುಭವ ಹಾಗೂ ಸಮಗ್ರತೆಯನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಮಿತಿಗೆ ನೀಡಿದ ಸೇವಾ ದಾಖಲೆ ಆಧಾರದಲ್ಲಿ, ಅಲೋಕ್ ಕುಮಾರ್ ವರ್ಮಾ ಅವರಿಗೆ ಭ್ರಷ್ಟಾಚಾರ ನಿಗ್ರಹ ವಿಚಾರ ಅಥವಾ ಸಿಬಿಐನಲ್ಲಿ ಯಾವ ಅನುಭವವೂ ಇಲ್ಲ. ಈ ವಿಚಾರದಲ್ಲಿ ಹಿಂದಿನ ಸರಕಾರಗಳು ಅನುಸರಿಸಿದ ಮಾನದಂಡದಿಂದ ದೂರ ಸರಿಯಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ದತ್ತಾ ಅವರು ಇದಕ್ಕೆ ಸೂಕ್ತವಾದ ಅಭ್ಯರ್ಥಿ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ. ಇವರು ಸಿಬಿಐನಲ್ಲಿ 208 ತಿಂಗಳು ಹಾಗೂ ಕರ್ನಾಟಕ ಎಡಿಸಿಪಿ ಆಗಿ ಲೋಕಾಯುಕ್ತದಲ್ಲಿ 43 ತಿಂಗಳ ಅನುಭವ ಹೊಂದಿದ್ದಾರೆ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.







