ಕೊನೆಯ ದಿನ 330 ಮಂದಿಯ ಶಿಕ್ಷೆ ಕಡಿತಗೊಳಿಸಿದ ಒಬಾಮ
ದಾಖಲೆ ಸೃಷ್ಟಿಸಿದ ಆದೇಶ

ವಾಷಿಂಗ್ಟನ್, ಜ.20: ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಾವಧಿಯ ಕೊನೆಯ ದಿನ 330 ಕೈದಿಗಳ ಶಿಕ್ಷೆಯನ್ನು ಕಡಿತಗೊಳಿಸುವ ಮೂಲಕ ಬರಾಕ್ ಒಬಾಮಾ ದಾಖಲೆ ಸೃಷ್ಟಿಸಿದ್ದಾರೆ. ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ 24 ಗಂಟೆಗಳ ಒಳಗೆ ಈ ಅಚ್ಚರಿಯ ಆದೇಶವನ್ನು ಒಬಾಮಾ ಹೊರಡಿಸಿದ್ದಾರೆ.
ಈ ನಿರ್ಧಾರದಿಂದಾಗಿ ಒಬಾಮಾ ತಮ್ಮ ಆಡಳಿತ ಅವಧಿಯಲ್ಲಿ ಶಿಕ್ಷೆ ಕಡಿತಗೊಳಿಸಿದ ಕೈದಿಗಳ ಸಂಖ್ಯೆ 1,715 ಆಗಿದೆ. ಇದರಲ್ಲಿ 5,68 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರೂ ಸೇರಿದ್ದಾರೆ. ಮಂಗಳವಾರ ಶಿಕ್ಷೆ ಕಡಿತಗೊಂಡವರಲ್ಲಿ ಬಹುತೇಕ ಮಂದಿ ಹಿಂಸಾತ್ಮಕವಲ್ಲದ ಮಾದಕವಸ್ತು ಅಪರಾಧಗಳನ್ನು ಎಸಗಿದವರು.
ಆದರೆ ಅಮೆರಿಕದ ಯುದ್ಧ ಕೈದಿ ಆರ್ಮಿ ಸಾರ್ಜಂಟ್ ಬೋವ್ ಬೆರ್ಗ್‌ದಾಹಿ ಅವರ ಕ್ಷಮಾದಾನದ ಬೇಡಿಕೆಯನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಇವರು ಅಪ್ಘಾನಿಸ್ತಾನಕ್ಕೆ ಮಾಡಿದ್ದ ನಿಯೋಜನೆಯಿಂದ 2009ರಲ್ಲಿ ಇವರು ಹಿಂದೆ ಸರಿದಿದ್ದರು. ಇವರ ಕೋರ್ಟ್‌ಮಾರ್ಷಲ್ ಫೆಬ್ರವರಿ 6ಕ್ಕೆ ನಿಗದಿಯಾಗಿದೆ.
ಚುನಾಯಿತ ಅಧ್ಯಕ್ಷ ಸಾರ್ಜಂಟ್ ಬೋವ್ ಬೆರ್ಗ್‌ದಾಹಿ ಅವರ ಕಟ್ಟಾ ವಿರೋಧಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಟ್ರಂಪ್, ಬೆರ್ಗ್‌ದಾಹಿ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಈ ವಾರದ ಆರಂಭದಲ್ಲಿ ಒಬಾಮಾ, ಶ್ವೇತಭವನದ ರಹಸ್ಯ ದಾಖಲೆ ಬಹಿರಂಗಗೊಳಿಸಿದ ಆರೋಪಿ ಚೆಲ್ಸಿಯಾ ಮ್ಯಾನಿಂಗ್ ಅವರ ಶಿಕ್ಷೆಯನ್ನು ಕಡಿತಗೊಳಿಸಿದ್ದರು.







