ಜಲ್ಲಿಕಟ್ಟು ವಿವಾದ : ತೀರ್ಪನ್ನು ಒಂದು ವಾರ ಮುಂದೂಡಲು ಒಪ್ಪಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜ.20 :ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧದ ವಿರುದ್ಧ ಪ್ರತಿಭಟನೆಗಳು ಕಾವೇರುತ್ತಿದ್ದಂತೆಯೇ ಕೇಂದ್ರ ಸರಕಾರದ ಅಪೀಲಿಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧದ ತೀರ್ಪನ್ನು ಒಂದು ವಾರ ಮುಂದೂಡಲು ಶುಕ್ರವಾರ ಒಪ್ಪಿದೆ. ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ,ಜಲ್ಲಿಕಟ್ಟು ಸಂಬಂಧದ ಅಂತಿಮ ಆದೇಶ ಬಂದಿದ್ದೇ ಆದಲ್ಲಿ ಅದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಬಹುದೆಂಬ ಕಾರಣ ನೀಡಿ ತೀರ್ಪು ನೀಡುವುದನ್ನು ತಡೆ ಹಿಡಿಯಬೇಕೆಂದು ಕೋರಿದ್ದರು.
ಇಂದು ವಿಪಕ್ಷ ಡಿಎಂಕೆ ಸದಸ್ಯರು ಈ ಸಾಂಪ್ರದಾಯಿಕ ಕ್ರೀಡೆಗೆ ಬೆಂಬಲವಾಗಿ ರೈಲ್ ರೋಕೋ ಚಳುವಳಿಯನ್ನು ನಡೆಸಿದರಲ್ಲದೆ ಪಕ್ಷ ನಾಯಕ ಎಂ ಕೆ ಸ್ಟ್ಯಾಲಿನ್ ನೇತೃತ್ವದಲ್ಲಿ ಮಾಂಬಳಂ ರೈಲು ನಿಲ್ದಾಣದಲ್ಲಿ ರೈಲೊಂದನ್ನೂ ತಡೆ ಹಿಡಿದಿದ್ದಾರೆ. ಈ ಸಂದರ್ಭ ಸ್ಟ್ಯಾಲಿನ್ ಅವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ನಂತರ ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಇದರ ತಿದ್ದುಪಡಿಗಾಗಿ ಕರಡು ಸುಗ್ರೀವಾಜ್ಞೆಯೊಂದನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆಕಳುಹಿಸಲಾಗಿದೆ ಎಂದು ಈಗಾಗಲೇ ಹೇಳಿರುವ ಮುಖ್ಯಮಂತ್ರಿ ಪನೀರ್ ಸೆಲ್ವನ್, ಪ್ರತಿಭಟನೆ ಹಿಂದೆಗೆದುಕೊಂಡು ಮರೀನಾ ಬೀಚಿನಿಂದ ಹಿಂದೆ ಹೋಗುವಂತೆ ಪ್ರತಿಭಟನಾಕಾರರನ್ನು ವಿನಂತಿಸಿದ್ದಾರೆ.
ಗುರುವಾರದಂದು ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಜಲ್ಲಿಕಟ್ಟು ಅನುಮತಿಸಲು ಕೇಂದ್ರ ಸುಗ್ರೀವಾಜ್ಷೆ ಹೊರಡಿಸಬೇಕೆಂದು ಕೋರಿದ್ದರೂ ಪ್ರಕರಣ ನ್ಯಾಯಾಲಯದ ಮುಂದಿರುವುದರಿಂದ ತಾವು ಅಸಹಾಯಕ ಎಂದು ಪ್ರಧಾನಿ ಹೇಳಿದ್ದರು.







