ನೋಟು ರದ್ದತಿಯಿಂದ ಭಯೋತ್ಪಾದಕರಿಗೆ ಹಣ ಸಿಗುವುದು ನಿಜವಾಗಿಯೂ ನಿಂತಿದೆಯೇ?
ಇಲ್ಲಿದೆ ಬಿಜೆಪಿ ಶಾಸಕನಿಗೆ ಜಮ್ಮು ಕಾಶ್ಮೀರ ಸರಕಾರ ನೀಡಿದ ಉತ್ತರ

ಜಮ್ಮು, ಜ.20: ನೋಟು ರದ್ದತಿಯಿಂದಾಗಿ ಕಾಶ್ಮೀರ ಕಣಿವೆ ಇಲ್ಲವೇ ಬೇರೆಲ್ಲಿಯಾದರೂ ಹಿಂಸಾಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂದು ಜಮ್ಮು ಕಾಶ್ಮೀರದ ಪಿಡಿಪಿ-ಬಿಜೆಪಿ ಸರಕಾರ ಹೇಳಿಕೊಂಡಿದೆಯಲ್ಲದೆ ನೋಟು ರದ್ದತಿಯಿಂದಾಗಿ ಭಯೋತ್ಪಾದಕರಿಗೆ ಹಣ ಸಿಗುವುದು ನಿಂತಿದೆ ಎಂಬ ಕೇಂದ್ರ ಸರಕಾರದ ವಾದವನ್ನು ರಾಜ್ಯ ಸರಕಾರ ಒಪ್ಪಿಲ್ಲ.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಜಮ್ಮು ಪಶ್ಚಿಮ ಕ್ಷೇತ್ರದ ಶಾಸಕ ಸಲ್ ಪಾಲ್ ಶರ್ಮ ಅವರು ಕೇಳಿದ ಪ್ರಶ್ನೆಯೊಂದಕ್ಕೆ ರಾಜ್ಯ ಸರಕಾರ ವಿಧಾನಸಭೆಯಲ್ಲಿ ಮೇಲಿನ ಉತ್ತರ ನೀಡಿದೆ. ಹಿಂಸೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲು ನಕಲಿ ನೋಟುಗಳನ್ನು ಉಪಯೋಗಿಸಲಾಗುತ್ತಿತ್ತು ಎಂಬ ಕೇಂದ್ರ ಸರಕಾರದ ವಾದವನ್ನು ಜಮ್ಮು ಕಾಶ್ಮೀರ ಸರಕಾರ ಅಲ್ಲಗಳೆದಿದೆ. ನಕಲಿ ನೋಟುಗಳನ್ನು ಉಪಯೋಗಿಸಲಾಗುತ್ತಿದೆ ಎಂಬುದಕ್ಕೆ ಪುರಾವೆಯಾಗಿ ಯಾವುದೇ ಗುಪ್ತಚರ ವರದಿಗಳೂ ಬಂದಿಲ್ಲ ಎಂದು ಅದು ಹೇಳಿದೆ.
ನೋಟು ರದ್ದತಿಯ ನಂತರವೇ ಕಾಶ್ಮೀರ ಕಣಿವೆಯಲ್ಲಿ ಕಲ್ಲು ತೂರಾಟ ಪ್ರಕರಣಗಳು ನಿಂತಿವೆಯೆಂಬ ಕೇಂದ್ರ ಸರಕಾರದ ಹೇಳಿಕೆಯನ್ನಾಧರಿಸಿ ಕಲ್ಲು ತೂರಾಟ ಪ್ರಕರಣಗಳು ತಮ್ಮಿಂತಾನಾಗಿಯೇ ನಿಂತವೇ ಅಥವಾ ನೋಟು ರದ್ದತಿಯ ನಂತರ ನಿಂತವೇ ಎಂಬ ಪ್ರಶ್ನೆಗೆ ರಾಜ್ಯದ ಅಧಿಕಾರಿಗಳು ‘‘ಅದರ ಅರ್ಥ ಹಾಗೆಯೇ ಆಗಿದೆ’’ ಎಂದಷ್ಟೇ ಹೇಳಿದ್ದಾರೆ.





