ಪ್ರಜ್ಞಾಸಿಂಗ್ ಠಾಕೂರ್‌ಗೆ ಜಾಮೀನು ನೀಡಬಹುದು: ಎನ್‌ಐಎ

ಮುಂಬೈ,ಜ.20: ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲುಪಾಲಾದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಕೋರ್ಟು ಜಾಮೀನು ನೀಡುವುದಾದರೆ ನಾವು ವಿರೋಧಿಸುವುದಿಲ್ಲ ಎಂದು ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಮುಂಬೈ ಹೈಕೋರ್ಟಿಗೆ ತಿಳಿಸಿದೆ.
ಅಡಿಷನಲ್ ಸಾಲಿಸಿಟ್ ಜನರಲ್ ಅನಿಲ್ ಸಿಂಗ್ ಎನ್‌ಐಎಗಾಗಿ ಕೋರ್ಟಿನಲ್ಲಿ ಹಾಜರಾಗಿ ತಿಳಿಸಿದ್ದಾರೆ. ಪ್ರಜ್ಞಾಸಿಂಗ್ ವಿರುದ್ಧ ಮಕೊಕ(ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್)ವನ್ನು ಹೇರಬೇಕಿಲ್ಲ ಎಂದು ಎನ್‌ಐಎ ನಿರ್ಧರಿಸಿದ ಬೆನ್ನಿಗೆ ಜಾಮೀನು ನೀಡಲು ವಿರೋಧವಿಲ್ಲ ಎಂದು ಎನ್‌ಐಎ ಈಗ ತೀರ್ಮಾನಿಸಿದೆ.
ಹಿಂದೆ ಪ್ರಜ್ಞಾ ಸಿಂಗ್ ಕೋರ್ಟಿನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅರ್.ವಿ. ಮೋರ್, ಶಾಲಿನಿ ಪನ್ಸಲ್ಕರ್ ಜೋಷಿ ಅವರಿದ್ದ ಪೀಠ ತಿರಸ್ಕರಿಸಿತ್ತು. ಆರೋಪಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಾತ್ರವಲ್ಲ, ಇತರ ಕೆಲವು ಸ್ಫೋಟಗಳಲ್ಲಿಯೂ ಶಾಮಿಲಾಗಿದ್ದಾರೆಂದು ಈ ಹಿಂದೆ ಕೇಸು ತನಿಖೆ ಮಾಡಿದ್ದ ಎಟಿಎಸ್ (ಮಹಾರಾಷ್ಟ್ರ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್) ಮಕೊಕ ಹೇರಿತ್ತು. ಆದರೆ ಎನ್ ಐಎ ಆರೋಪಿ ಮಾಲೆಗಾಂವ್ ಸ್ಫೋಟದಲ್ಲಿ ಮಾತ್ರ ಶಾಮಿಲಾಗಿದ್ದಾರೆಂದು ನಿರ್ಧರಿಸಿ ಆರೋಪಿಗೆ ಜಾಮೀನು ನೀಡಬಹುದು ಎಂದು ಕೋರ್ಟಿಗೆ ತಿಳಿಸಿದೆ. ಪ್ರಕರಣದ ವಿಚಾರಣೆ ಹೈಕೋರ್ಟು ಜನವರಿ 31ಕ್ಕೆ ಮುಂದೂಡಿದೆ ಎಂದು ವರದಿಯಾಗಿದೆ.







