ಶಿಕ್ಷಣದಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ: ಎಚ್. ಬಿಲ್ಲಪ್ಪ

ಕಡೂರು, ಜ.20: ಮನುಷ್ಯ ಮನುಷ್ಯನ ಜೀವನಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಇದುವರೆಗೂ ಯಾವುದೇ ರೀತಿಯಲ್ಲೂ ಮನುಷ್ಯ ಬದಲಾವಣೆಯಾಗಿರುವುದಿಲ್ಲ. ಶಿಕ್ಷಣ ಮನುಷ್ಯನಿಗೆ ಏಕೆ ಬೇಕು. ಶಿಕ್ಷಣ ಎಂದರೆ ಪದವಿಗಳನ್ನು ಪಡೆಯಲು ಅಲ್ಲ. ಶಿಕ್ಷಣ ಎಂದರೆ ಸಮಾಜದಲ್ಲಿ ಸುಸಂಸ್ಕೃತವಂತರಾಗಿರಬೇಕು ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ಎಚ್.ಬಿಲ್ಲಪ್ಪ ತಿಳಿಸಿದರು.
ಅವರು ಕಡೂರು ಪಟ್ಟಣದ ಕಾಮಧೇನು ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಸಮಾರಂಭದಲ್ಲಿ ಮಾತನಾಡಿದರು. ನೂರಾರು ವರ್ಷಗಳಿಂದಲೂ ಹಲವಾರು ಧರ್ಮ ಪ್ರಚಾರಕರು, ಧರ್ಮಗಳು ಒಳ್ಳೆಯವರಾಗಿ ಎಂದು ಹೇಳುತ್ತಲೇ ಬಂದಿದೆ. ಆದರೂ ಸಹ ಮನುಷ್ಯ ಬದಲಾವಣೆಯಾಗಿಲ್ಲ. ಇದಕ್ಕೆ ಶಿಕ್ಷಣ ಬೇಕಿದೆ. ಶಿಕ್ಷಣ ಸಮಾಜವನ್ನು, ವಿಶ್ವವನ್ನು ಬದಲಾಯಿಸುವಂತಾಗಬೇಕಿದೆ. ಮಾನವೀಯತೆ, ನೈತಿಕ ಮೌಲ್ಯ ಕಲಿಯದಿದ್ದರೆ ಶಿಕ್ಷಣಕ್ಕೆ ಬೆಲೆ ಇಲ್ಲ ಎಂದರು.
ನರ್ಸಿಂಗ್ ಶಿಕ್ಷಣ ಸಮಾಜಕ್ಕೆ ಸೂಕ್ಷ್ಮವಾಗಿರಬೇಕಿದೆ. ನರ್ಸಿಂಗ್ ಹುದ್ದೆ ಎಂದರೆ ಸಾಮಾನ್ಯವಾದುದಲ್ಲ. ಯಾವುದೇ ವೈದ್ಯರುಗಳು ಒಂದು ಜೀವವನ್ನು ಉಳಿಸುವ ಕಾರ್ಯ ಮಾಡುವ ಸಂದರ್ಭದಲ್ಲಿ ನರ್ಸಿಂಗ್‌ನವರು ಉತ್ತಮ ಸಹಾಯಕರಾಗಿ ಕೆಲಸ ಮಾಡಬೇಕಿದೆ. ನರ್ಸಿಂಗ್ ಹುದ್ದೆಯವರಿಗೆ ತಾಯ್ತನ, ಒಳ್ಳೆಯತನ, ಸೂಕ್ಷ್ಮತೆ ಇರಬೇಕಿದೆ. ಸಮಾಜದಲ್ಲಿ ಮುಖ್ಯವಾಗಿ ನಿಸ್ವಾರ್ಥ ಸೇವೆಯ ಮನೋಭಾವ ಬರಬೇಕಿದೆ ಎಂದು ಹೇಳಿದರು.
ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಆರ್.ಲಕ್ಕಪ್ಪ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಕಾರ್ಯದರ್ಶಿ ಎಂ.ನಿಜಲಿಂಗಪ್ಪ ವಹಿಸಿದ್ದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಮೇಶ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಸಮಾರಂಭದಲ್ಲಿ ಹೊಸದುರ್ಗ ತಾಲೂಕು ಉಪವೀರ ಸಮಾಜದ ಅಧ್ಯಕ್ಷ ಬಿ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ರುದ್ರಪ್ಪ, ಚೇತನ ಆಸ್ಪತ್ರೆಯ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.







