ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿ ಐಟಿ ದಾಳಿ ದುರುದ್ದೇಶಪೂರಿತ: ಸಿದ್ದರಾಮಯ್ಯ

ಶಿವಮೊಗ್ಗ, ಜ.20: ಆದಾಯ ತೆರಿಗೆ ಇಲಾಖೆಗೆ ದಾಳಿ ಮಾಡಲು ಸಂಪೂರ್ಣ ಅಧಿಕಾರವಿದೆ. ಆದರೆ ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸರಿಯಲ್ಲ. ಅದು ದುರುದ್ದೇಶಪೂರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾ ಕ್ರೀಡಾಂಗಣ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆಂತರಿಕ ಕಚ್ಚಾಟವನ್ನು ಮುಂದಿಟ್ಟುಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರ ಮುಂದೆ ಹೋಗುವುದಿಲ್ಲ. ನಮ್ಮ ಸರಕಾರದ ಸಾಧನೆಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಕುರಿತು ರಾಜ್ಯಪಾಲರು ಕೆಲವೊಂದು ಸ್ಪಷ್ಟೀಕರಣ ಕೇಳಿದ್ದಾರೆ. ಅದನ್ನು ಅವರಿಗೆ ಕಳುಹಿಸಿಕೊಡಲಾಗುವುದು. ನಾಗರಿಕ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದು ಖಂಡನೀಯ. ಜೊತೆಗೆ ಅದು ಪೈಶಾಚಿಕ ಕೃತ್ಯವಾಗಿದ್ದು, ದೌರ್ಜನ್ಯ ಎಸಗಿದವರ ವಿರುದ್ಧ ಸರಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ನುಡಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.







