ಅಮ್ಮಿಯಿಂದ ನಿರ್ಗಮಿಸಿದ ವಿದ್ಯಾಬಾಲನ್

ಮಲಯಾಳಂನ ಖ್ಯಾತ ಬರಹಗಾರ್ತಿ ದಿ.ಕಮಲಾ ಸುರೈಯಾ ಅವರ ಜೀವನ ಕಥೆಯನ್ನು ಆಧರಿಸಿದ ಚಿತ್ರ ‘ಅಮ್ಮಿ’ಯಿಂದ ವಿದ್ಯಾಬಾಲನ್ ಹೊರನಡೆದಿದ್ದಾರೆ. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು, ಶೂಟಿಂಗ್ ಆರಂಭಕ್ಕೆ ಇನ್ನೇನು ಕೇವಲ ಐದು ದಿನಗಳಿರುವಾಗ ವಿದ್ಯಾಬಾಲನ್, ಚಿತ್ರಕ್ಕೆ ‘ನೋ’ ಎಂದಿರುವುದು ಹಿರಿಯ ನಿರ್ದೇಶಕ ಕಮಲ್‌ಗೆ ತೀವ್ರ ಅಸಮಾಧಾನ ತಂದಿದೆ.ವಿದ್ಯಾಬಾಲನ್ ವೃತ್ತಿಪರತೆಯಿಲ್ಲದೆ ವರ್ತಿಸಿದ್ದಾರೆಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ ಸುರೈಯಾ ಪಾತ್ರಕ್ಕೆ ಸಮರ್ಥಳಾದ ನಟಿಯ ಹುಡುಕಾಟವನ್ನು ಈಗಲೇ ಆರಂಭಿಸಿರುವುದಾಗಿ ಅವರು ಹೇಳಿದ್ದಾರೆ. ಏನೇ ಆದರೂ ಮುಂದಿನ ಒಂದೆರಡು ತಿಂಗಳುಗಳಲ್ಲಿ ಅಮ್ಮಿ ಸೆಟ್ಟೇರುವುದು ಖಚಿತವೆಂದು ಕಮಲ್ ಭರವಸೆ ನೀಡಿದ್ದಾರೆ.
ಅಂದಹಾಗೆ ವಿದ್ಯಾಬಾಲನ್ ಚಿತ್ರದಿಂದ ಹಿಂದೆ ಸರಿಯಲು ಯಾವುದೇ ಕಾರಣವನ್ನು ನೀಡಿಲ್ಲವಂತೆ. ಚಿತ್ರದ ಪಾತ್ರವನ್ನು ನಿರ್ವಹಿಸಲು ತನಗೆ ಸಾಧ್ಯವಾಗದು ಎಂದಷ್ಟೇ ಆಕೆ ಮೆಸೇಜ್ ಕಳುಹಿಸಿರುವುದಾಗಿ ಕಮಲ್ ಹೇಳಿದ್ದಾರೆ. ಚಿತ್ರಕಥೆಯಲ್ಲಿ ಕೆಲವೊಂದು ಬದಲಾವಣೆ ಗಳನ್ನು ಮಾಡಲು ವಿದ್ಯಾ, ಕಮಲ್‌ಗೆ ಸಲಹೆ ನೀಡಿದ್ದಾರಂತೆ. ಆದರೆ ಅವರು ಒಪ್ಪದ ಕಾರಣ ವಿದ್ಯಾ ಚಿತ್ರಕ್ಕೆ ಗುಡ್‌ಬೈ ಹೇಳಿದ್ದಾರೆಂದು ನಟಿಯ ಕಾರ್ಯದರ್ಶಿಯ ಆಂಬೋಣ. ಆದರೆ ಕಮಲ್ ಅದನ್ನು ಒಪ್ಪುತ್ತಿಲ್ಲ. ವಿದ್ಯಾಳ ಈ ನಿರ್ಧಾರದ ಹಿಂದೆ ಕೇಸರಿ ಬಲಪಂಥೀಯ ಶಕ್ತಿಗಳ ಒತ್ತಡ ಇರುವ ಸಾಧ್ಯತೆಯೂ ಇಲ್ಲದಿಲ್ಲವೆಂದು ಕಮಲ್‌ರ ಅಭಿಪ್ರಾಯಿಸಿದ್ದಾರೆ. ರಾಷ್ಟ್ರಗೀತೆ ಕುರಿತ ವಿವಾದದಲ್ಲಿ ಕಮಲ್ ಹೆಸರು ಥಳಕುಹಾಕಿಕೊಂಡಿರುವುದು ವಿದ್ಯಾ ಹಿಂದೆ ಸರಿಯಲು ಕಾರಣವಾಗಿರಬಹುದೆಂದು ಕೆಲವರು ಸಂದೇಹಿಸಿದ್ದಾರೆ.







