ಚುನಾವಣೆಗಳ ಬಳಿಕ ಮುಂಗಡಪತ್ರ ಮಂಡನೆ? : ಸೋಮವಾರ ಅಹವಾಲು ಕೈಗೆತ್ತಿಕೊಳ್ಳಲಿರುವ ಸುಪ್ರೀಂ

ಹೊಸದಿಲ್ಲಿ,ಜ.20: ಕೇಂದ್ರ ಸರಕಾರದ ವಾರ್ಷಿಕ ಮುಂಗಡಪತ್ರ ಮಂಡನೆಯನ್ನು ಫೆ.1ರಿಂದ ಉ.ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಪಂಚರಾಜ್ಯಗಳಲ್ಲಿ ಚುನಾವಣೆಗಳು ಮುಗಿದ ಬಳಿಕ ಮುಂದೂಡುವಂತೆ ಕೋರಿಕೊಂಡು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೈಗೆತ್ತಿಕೊಳ್ಳಲಿದೆ. ವಿತ್ತ ಸಚಿವಾಲಯವು ಮುಂಗಡಪತ್ರ ದಾಖಲೆಗಳ ಮುದ್ರಣವನ್ನು ಗುರುವಾರ ಆರಂಭಿಸಿದೆ.
ಕೇಂದ್ರವು ಮುಂಗಡಪತ್ರದಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಮೂಲಕ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವವನ್ನು ಬೀರಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿರುವ ಅರ್ಜಿದಾರರಾದ ನ್ಯಾಯವಾದಿ ಎಂ.ಎಲ್ ಶರ್ಮಾ,ಈ ಕಾರಣದಿಂದ ಮುಂಗಡಪತ್ರವನ್ನು ಚುನಾವಣೆಗಳು ಮುಗಿದ ಬಳಿಕ,ಎಪ್ರಿಲ್‌ನಲ್ಲಿ ಮಂಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಸರಕಾರಗಳು ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳತ್ತ ಮತದಾರರನ್ನು ಸೆಳೆಯುವ ಯಾವುದೇ ಕೊಡುಗೆಯನ್ನು ಮುಂದಿರಿಸಲು ಅಥವಾ ಪ್ರಕಟನೆಗಳನ್ನು ನೀಡಲು ಚುನಾವಣಾ ನಿಯಮಗಳಲ್ಲಿ ಅವಕಾಶವಿಲ್ಲ.
ಪ್ರತಿ ವರ್ಷದ ಫೆಬ್ರವರಿ ತಿಂಗಳ ಕೊನೆಯ ದಿನ ಮುಂಗಡಪತ್ರವನ್ನು ಮಂಡಿಸುವ ಪರಿಪಾಠವನ್ನು ಈ ವರ್ಷ ಕೈಬಿಡಲಾಗಿದ್ದು, ಫೆ.1ರಂದು ಮಂಡಿಸಲು ಸರಕಾರವು ನಿರ್ಧರಿಸಿದೆ. ಅಲ್ಲದೆ,ಇದೇ ಮೊದಲ ಬಾರಿಗೆ ರೈಲ್ವೆ ಮುಂಗಡಪತ್ರವನ್ನು ಸಾಮಾನ್ಯ ಮುಂಗಡಪತ್ರದೊಂದಿಗೆ ವಿಲೀನಗೊಳಿಸಲಾಗಿದೆ. ಪಂಚರಾಜ್ಯಗಳಲ್ಲಿ ಚುನಾವಣೆ ಫೆ.4ರಿಂದ ನಡೆಯಲಿದೆ. ಮಾ.11ರಂದು ಫಲಿತಾಂಶಗಳು ಹೊರಬೀಳಲಿವೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಪೀಠವು ಸೋಮವಾರದಿಂದ ಅರ್ಜಿಯ ವಿಚಾರಣೆಯನ್ನು ಆರಂಭಿಸಲಿದೆ. ಆದರೆ ಅದು ಶೀಘ್ರವೇ ತೀರ್ಪನ್ನು ನೀಡಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.







