ಯಂಡಮೂರಿ ಚಿತ್ರಕ್ಕೆ ನವೀನ್ ಹೀರೋ

ತೆಲುಗು ಕಾದಂಬರಿಕಾರ ಯಂಡಮೂರಿ ವೀರೆಂದ್ರನಾಥ್, ಕನ್ನಡ ಕಾದಂಬರಿಪ್ರಿಯರಿಗೂ ಚಿರಪರಿಚಿತರು. ಯಂಡಮೂರಿ ಅವರ ಬಹುತೇಕ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಅವುಗಳಲ್ಲಿ ಕೆಲವು ಸಿನೆಮಾ ಕೂಡಾ ಆಗಿವೆ. ಬೆಳದಿಂಗಳ ಬಾಲೆ ಕಾದಂಬರಿ ಚಿತ್ರವಾಗಿ ಭಾರೀ ಯಶಸ್ಸು ಕಂಡಿತಲ್ಲದೆ, ವಿಮರ್ಶಕರ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿತ್ತು. ಇದೀಗ ಯಂಡಮೂರಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆಂಬ ಸುದ್ದಿ ಇಡೀ ಸ್ಯಾಂಡಲ್‌ವುಡನ್ನು ಪುಳಕಗೊಳಿಸಿದೆ. ಆದಾಗ್ಯೂ ಯಂಡಮೂರಿ ನಿರ್ದೇಶಕನ ಹ್ಯಾಟ್ ಧರಿಸುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆ ಎರಡು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದರು.
ಇದೀಗ ಯಂಡಮೂರಿ ನಿರ್ದೇಶಿಸಲಿರುವ ಕನ್ನಡ ಚಿತ್ರವು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ನಡೆಯುವ ಅದ್ಭುತ ಪ್ರೇಮಕಥಾನಕನ್ನು ಒಳಗೊಂಡಿದೆಯಂತೆ. ಯಂಡಮೂರಿಯವರ ಕೆಲವು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಯತಿರಾಜ್ ವೀರಾಂಬುದಿ ಚಿತ್ರಕಥೆ ಬರೆಯಲು ನೆರವಾಗಲಿದ್ದಾರೆ.
ಇದಕ್ಕಿಂತಲೂ ಇನ್ನೊಂದು ಇಂಟರೆಸ್ಟಿಂಗ್ ವಿಷಯವೆಂದರೆ, ಕೆಲವು ಚಿತ್ರಗಳಲ್ಲಿ ಹಾಗೂ ಟಿವಿ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನವೀನ್ ತೀರ್ಥಹಳ್ಳಿ, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿದ್ದಾರೆ.
ನವೀನ್‌ಗೆ ಈ ಚಿತ್ರವು ಒಂದು ದೊಡ್ಡ ಬ್ರೇಕ್ ನೀಡಲಿದೆ. ಇತ್ತೀಚೆಗಷ್ಟೇ ಅವರು ಕನ್ನಡ ಚಿತ್ರ ಕ್ರೌರ್ಯದಲ್ಲಿ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದರು. ಯಂಡಮೂರಿಯವರ ಚಿತ್ರದಲ್ಲಿ ನವೀನ್ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಯ ಪಾತ್ರ ವಹಿಸಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಕೆಲವು ಸ್ಟಂಟ್ ದೃಶ್ಯಗಳನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದ ಕ್ಲೈಮಾಕ್ಸ್ ಆ್ಯಕ್ಷನ್ ದೃಶ್ಯಗಳು ಅತ್ಯಂತ ರೋಮಾಂಚಕವಾಗಲಿದ್ದು, ಖಂಡಿತವಾಗಿಯೂ ಪ್ರೇಕ್ಷಕರನ್ನು ರಂಜಿಸಲಿದೆಯೆಂದು ನವೀನ್ ಭರವಸೆಯೊಂದಿಗೆ ಹೇಳುತ್ತಾರೆ.







