ಹೊಸಪಠ್ಯಕ್ರಮ ಜಾರಿಗೆ ಎಬಿವಿಪಿ ವಿರೋಧ

ಭಟ್ಕಳ, ಜ.20 : 2016-17ನೇ ಸಾಲಿನ ಹೊಸ ಪಠ್ಯಪುಸ್ತಕ ಜಾರಿಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಟ್ಕಳ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ 1 ರಿಂದ 10ನೇ ತರಗತಿಗಳ ಪಠ್ಯ ಪುಸ್ತಕಗಳನ್ನು ಪರಿಷ್ಕರಣ ಸಮಿತಿಯು ಯಾವುದೇ ಪರಿಷ್ಕರಣೆಗೆ ಒಳಪಡಿಸದೇ ನಿಗೂಢತೆಯಿಂದ 2016-17ನೇ ಸಾಲಿನಿಂದಲೇ ಹೊಸ ಪಠ್ಯಪುಸ್ತಕವನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡನೀಯವಾಗಿದೆ. ರಾಜ್ಯ ಸರಕಾರ ಟೆಂಡರ್ ಪ್ರಕ್ರಿಯೆ ಮಧ್ಯದಲ್ಲಿ ಡಿ.ಎಸ್.ಇ.ಆರ್.ಟಿ., ಡಯಟ್ ಗಳು, ಸಿ.ಇ.ಟಿ. ಎಲ್ಲಾ ಜಿಲ್ಲೆಗಳ ಆಯಾಯ ವಿಷಯ ಶಿಕ್ಷಕರ ವೇದಿಕೆಗಳಲ್ಲಿ ಕರಡು ಪುಸ್ತಕಗಳನ್ನು ಚರ್ಚಿಸದೇ ನೇರವಾಗಿ ಸರಕಾರವೂ ಪರಿಶೀಲಿಸದೇ ಮುದ್ರಣಕ್ಕೆ ಕಳುಹಿಸಬೇಕು ಎನ್ನುವ ನಿರ್ಧಾರದಿಂದ ಪೋಷಕರು, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಗೊಂದಲಕ್ಕೀಡಾಗುವಂತಾಗಿದೆ. ಇಂತಹ ನಿರ್ಧಾರದಿಂದ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ .
ಕೇಂದ್ರದಿಂದ ಹೊಸ ಶಿಕ್ಷಣ ನೀತಿಜಾರಿಗೆ ಬರುವಂತಹ ಸಂದರ್ಭದಲ್ಲಿ ಈ ವರ್ಷ ಹೊಸ ಪಠ್ಯಕ್ರಮ ಜಾರಿ ಮಾಡಿ ಮುಂದಿನ ವರ್ಷವೂ ಬದಲಿಸುವುದು ಅಸಾಧ್ಯವಾಗುತ್ತದೆ. ಅಲ್ಲದೇ ಒಂದೇ ಬಾರಿಗೆ 1 ರಿಂದ 10ನೇ ತರಗತಿಯ ಪಠ್ಯಕ್ರಮ ಜಾರಿ ಮಾಡುವುದೂ ಕಷ್ಟಕರವಾಗಿ ಪರಿಣಮಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದೂ ಕೂಡಾ ಕಷ್ಟಕರವಾಗುವುದರಿಮದ ತಕ್ಷಣ ಬದಲಾವಣೆಯ ನಿಲುವನ್ನು ಬದಲಾಯಿಸಿ ಈ ಹಿಂದಿನಂತೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ಪ್ರಮುಖರು ಉಪಸ್ಥಿತರಿದ್ದರು.







