ಬ್ಲಾಕ್‌ಮೇಲ್ ಪ್ರಕರಣ: ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯ!

ತೊಡುಪುಯ,ಜ.20: ಬಿಯರ್ ಬಾಟ್ಲಿಯಲ್ಲಿ ತಲೆಗೆ ಹೊಡೆತಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ವಂಡಮಟ್ಟಂ ಅಂಪಾಟ್ ಅರ್ಜುನ್(20) ಮೃತಪಟ್ಟ ವಿದ್ಯಾರ್ಥಿಯಾಗಿದ್ದು ಮೂಲಮಟ್ಟಂ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಎನ್ನಲಾಗಿದೆ.
ತನ್ನ ಸಹಪಾಠಿ ವಿದ್ಯಾರ್ಥಿನಿಯೊಬ್ಬಳ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಫೋನ್ ಕರೆಗಳ ವಿವರ ಅರ್ಜುನ್‌ಗೆ ಸಿಕ್ಕಿತ್ತು. ಇದನ್ನು ಮುಂದಿಟ್ಟು ಆತ ವಿದ್ಯಾರ್ಥಿನಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ಈ ಕುರಿತು ಆತನೊಡನೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿನಿಯ ಮನೆಗೆ ಕರೆಯಿಸಿಕೊಳ್ಳಲಾಗಿತ್ತು. ಅಲ್ಲಿ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿನಿಯ ಸಹೋದರ ಬಿಯರ್ ಬಾಟ್ಲಿಯಿಂದ ಅರ್ಜುನ್‌ನ ತಲೆಗೆ ಹೊಡೆದಿದ್ದಾನೆ.
ಗಂಭೀರ ಗಾಯಗೊಂಡ ಅರ್ಜುನ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿ ಸಹೋದರ ಪ್ಲಸ್‌ಟು ವಿದ್ಯಾರ್ಥಿ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.





