ಮಲೇಷ್ಯಾ ಮಾಸ್ಟರ್ಸ್ :ಸೈನಾ ನೆಹ್ವಾಲ್ ಸೆಮಿಫೈನಲ್‌ಗೆ ; ಜಯರಾಮ್ ಹೊರಕ್ಕೆ

ಸರವಾಕ್(ಮಲೇಷ್ಯಾ), ಜ.20: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಾಜಿ ನಂ.1 ಭಾರತದ ಸೈನಾ ನೆಹ್ವಾಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇದೇ ವೇಳೆ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.19 ಶ್ರೇಯಾಂಕದ ಆಟಗಾರ ಅಜಯ್ ಜಯರಾಮ್ ಸೋತು ನಿರ್ಗಮಿಸಿದ್ದಾರೆ.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ ನೆಹ್ವಾಲ್ ಅವರು ಇಂಡೊನೇಷ್ಯಾದ ಫಿತ್ರಿಯಾನಿ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 21-15, 21-14 ಅಂತರದಲ್ಲಿ ಜಯ ಗಳಿಸಿದರು. 40 ನಿಮಿಷಗಳಲ್ಲಿ ಸೈನಾ ನೆಹ್ವಾಲ್ ಎದುರಾಳಿ ವಿರುದ್ಧ ಗೆಲುವಿನ ನಗೆ ಬೀರಿದರು.
ಸೈನಾ ನೆಹ್ವಾಲ್ ಅವರು ಫಿತ್ರಿಯಾನಿ ವಿರುದ್ಧ ಮೂರನೆ ಬಾರಿ ಜಯ ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಜಯಿಸಿದ್ದ ಸೈನಾ ನೆಹ್ವಾಲ್ ಅವರು ಸೆಮಿಫೈನಲ್‌ನಲ್ಲಿ ಹಾಂಕಾಂಗ್‌ನ ಯಿಪ್ ಪುಯಿ ಯಿನ್ ಅವರನ್ನು ಎದುರಿಸಲಿದ್ದಾರೆ.
ಯಿನ್ ವಿರುದ್ಧ ಸೈನಾ 6-2 ಗೆಲುವಿನ ದಾಖಲೆ ಹೊಂದಿದ್ದಾರೆ. 2010ರ ಏಷ್ಯನ್ ಗೇಮ್ಸ್‌ನಲ್ಲಿ ಸೈನಾ ವಿರುದ್ಧ ಯಿನ್ ಕೊನೆಯ ಬಾರಿ ಜಯ ಗಳಿಸಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ನಂ.19 ಅಜಯ್ ಜಯರಾಮ್ ಅವರು ಇಂಡೋನೇಷ್ಯಾದ ಅಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ 13-21, 8-21 ಅಂತರದಲ್ಲಿ ಸೋಲು ಅನುಭವಿಸಿದರು. ಇವರ ನಡುವಿನ ಹಣಾಹಣಿ 28 ನಿಮಿಷಗಳಲ್ಲಿ ಮುಗಿಯಿತು.
ಇಂಡೊನೇಷ್ಯಾದ ಗಿಂಟಿಂಗ್ ವಿರುದ್ಧ ಅಜಯ್ ಜಯರಾಮ್ ಮೂರನೆ ಬಾರಿ ಸೋಲು ಅನುಭವಿಸಿದ್ದಾರೆ. ಈ ಮೊದಲು ಹೈದರಾಬಾದ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಸೋಲು ಅನುಭವಿಸಿದ್ದರು.





